ನನ್ನ ಮೇಲೆ ವಿಪಕ್ಷಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿವೆ: ವರ್ತೂರು ಪ್ರಕಾಶ್

ಕೋಲಾರ, ನ.27: ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದೆ ವಿಪಕ್ಷಗಳು ನನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿವೆ ಎಂದು ಶಾಸಕ ವರ್ತೂರು ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ವೇಮಗಲ್ ಹೋಬಳಿಯ ಕಾಡಹಳ್ಳಿಯಲ್ಲಿ 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋಲಾರ ವಿಧಾನಸಭಾ ಕ್ಷೇತ್ರೆದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನನ್ನ ವಿರುದ್ಧ ಕುತಂತ್ರ ರಾಜಕಾರಣ ನಡೆಸಲು ಕೆಲವರು ಮುಂದಾಗಿದ್ದಾರೆ. ಓಟು ಗಿಟ್ಟಿಸಿಕೊಳ್ಳಲು ಇಂತಹ ಅಡ್ಡದಾರಿಗಳ ಮೂಲಕ ಜನರನ್ನು ತಲುಪುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸೀತಿ, ಕ್ಯಾಲನೂರು, ಕಾಡಹಳ್ಳಿ, ಅಮ್ಮನಲ್ಲೂರು ಮೂಲಕ ಕೈವಾರದ ಸಮೀಪವಿರುವ ಹೊಸಹಳ್ಳಿವರೆಗೂ ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಐದುವರೆ ಮೀಟರ್‍ಗಳಷ್ಟು ರಸ್ತೆ ಅಗಲೀಕರಣ ಮಾಡಲಾಗಿದೆ. ಇನ್ನೆರಡು ತಿಂಗಳೊಳಗೆ ಗುಣಮಟ್ಟದ ಕಾಮಗಾರಿಯನ್ನು ಮುಗಿಸಲಿದ್ದೇವೆ. ಇನ್ನೊಂದು ತಿಂಗಳಲ್ಲಿ ವೇಮಗಲ್ ಭಾಗದ ಕುರುಗಲ್, ಅಮ್ಮನಲ್ಲೂರು, ಸೀತಿ, ಕ್ಯಾಲನೂರು ಸೇರಿದಂತೆ ಎಲ್ಲಾ ಗ್ರಾಪಂಗಳ ರಸ್ತೆಗಳು ಡಾಂಬರೀಕರಣಗೊಳ್ಳಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ತಾಪಂ ಮಾಜಿ ಸದಸ್ಯ ಕೃಷ್ಣಾಪುರ ಶ್ರೀನಿವಾಸ್, ಜಿಪಂ ಸದಸ್ಯರಾದ ಉಷಾ ವೆಂಕಟೇಶ್, ಅರುಣ್ ಪ್ರಸಾದ್, ಸಿ.ಎಸ್.ವೆಂಕಟೇಶ್, ಆರಕ್ಷಕ ವೃತ್ತ ನಿರೀಕ್ಷಕ ಲಕ್ಷ್ಮೀ ನಾರಾಯಣ್, ಕ್ಯಾಲನೂರು ರಾಮಣ್ಣ, ಜೆಪಿ, ಸೀತಿ ಗ್ರಾಪಂ ಅಧ್ಯಕ್ಷ ಬೈರೇಗೌಡ, ಮಾಜಿ ಉಪಾಧ್ಯಕ್ಷ ಸುಬ್ಬಾರೆಡ್ಡಿ, ರೇಷ್ಮೆ ಸಹಕಾರ ಸಂಘದ ಅಧ್ಯಕ್ಷ ವೆಂಕಟರೆಡ್ಡಿ, ಕಾಡಹಳ್ಳಿ ಶ್ರೀನಿವಾಸ್, ಶೇಖರ್ ಮತ್ತಿತರರು ಹಾಜರಿದ್ದರು.







