ವಸತಿ ಯೋಜನೆಯಲ್ಲಿ ವಿಶ್ವಕರ್ಮ ಜನಾಂಗಕ್ಕೆ ವಿಶೇಷ ಅನುದಾನ ನೀಡಲು ಒತ್ತಾಯ

ತುಮಕೂರು, ನ.27: ಸರಕಾರ ಈ ಹಿಂದೆ ನೀಡಿರುವ ಭರವಸೆಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿರುವ ವಿಶ್ವಕರ್ಮ ಜನಾಂಗಕ್ಕೆ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ವಿಶೇಷ ಅನುದಾನ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ ರಾಜ್ಯಾಧ್ಯಕ್ಷ ಎಲ್.ನಾಗರಾಜಚಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 47 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ 2007ರಲ್ಲಿ ಅಂದಿನ ಸರಕಾರ ವಿವಿಧ ಯೋಜನೆಗಳಲ್ಲಿ ರಾಜೀವ್‍ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಿಸಿಕೊಡುವುದು, ನಿವೇಶನ ಇಲ್ಲದವರಿಗೆ ನಿವೇಶನ ಹಾಗೂ ಎರಡು ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿತ್ತು. ಇದರ ಫಲವಾಗಿ ರಾಜ್ಯದಾದ್ಯಂತ ಸುಮಾರು 22 ಸಾವಿರ ಅರ್ಜಿಗಳು ಸಲ್ಲಿಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ 60 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದ್ದರೂ ಇದುವರೆಗೂ ಮನೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಆದ್ದರಿಂದ ಸರಕಾರ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ ವಸತಿ ಯೋಜನೆಗೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.
ವಿಶ್ವಕರ್ಮ ಜನಾಂಗದವರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದೆ ಉಳಿದಿದ್ದು, ಈ ಸಮುದಾಯ ವನ್ನು ಪ್ರವರ್ಗ 1 ಕ್ಕೆ ಸೇರಿಸಬೇಕೆಂಬುದು ನಮ್ಮ ಬಹುದಿನ ಬೇಡಿಕೆಯಾಗಿದೆ. ಇದರಿಂದ ಶೇ.4ರಷ್ಟು ಮೀಸಲಾತಿ ದೊರೆತು, ಈ ಸಮುದಾಯದವರು ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹೊಯ್ಸಳರ ಕಾಲದಲ್ಲಿ ಚಕಣಾಚಾರಿಗಳಿಂದ ನಿರ್ಮಾಣವಾಯಿತು ಎನ್ನಲಾದ ಬೇಲೂರು ಮತ್ತು ಹಳೆಬೀಡು, ಇಡೀ ಪ್ರಪಂಚದಲ್ಲಿಯೇ ಶಿಲ್ಪಕತೆಗೆ ಹೆಸರುವಾಸಿಯಾಗಿದೆ. ಈ ಎರಡು ಕ್ಷೇತ್ರಗಳಲ್ಲಿಯೂ ಅಮರಶಿಲ್ಪಿ ಚಕಣಾಚಾರಿಯ ಪ್ರತಿಮೆ ಸ್ಥಾಪಿಸಬೇಕು. ಪ್ರತಿತಾಲೂಕು ಕೇಂದ್ರದಲ್ಲಿಯೂ ವಿಶ್ವಕರ್ಮರಿಗೆ ಎರಡು ಎಕರೆ ಭೂಮಿ ನೀಡಿ, ವಿದ್ಯಾರ್ಥಿ ನಿಲಯ ಆರಂಭಕ್ಕೆ ಅನುದಾನ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ ರಾಜ್ಯ ಉಪಾಧ್ಯಕ್ಷ ಜಿ.ಶಂಕರ್. ಬಿ. ಮಂಜುನಾಥ್, ಕೆ.ಎಸ್.ಪ್ರಸನ್ನ ಕುಮಾರ್, ನರಸಿಂಹಮೂರ್ತಿ ಉಪಸ್ಥಿತರಿದ್ದರು.







