ದ್ವಿತೀಯ ಸ್ಥಾನಕ್ಕೆ ಪೂಜಾರ ಭಡ್ತಿ, ಕೊಹ್ಲಿಗೆ 5ನೇ ಸ್ಥಾನ
ಐಸಿಸಿ ಟೆಸ್ಟ್ ರ್ಯಾಂಕಿಂಗ್

ದುಬೈ, ನ.28: ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮಂಗಳವಾರ ಇಲ್ಲಿ ಬಿಡುಗಡೆಯಾದ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಪೂಜಾರ ಎರಡನೇ ಸ್ಥಾನಕ್ಕೇರಿದ್ದಾರೆ ಎಂದು ಐಸಿಸಿ ತಿಳಿಸಿದೆ.
ನಾಗ್ಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 143 ರನ್ ಗಳಿಸಿದ ಪೂಜಾರ ಭಾರತ ತಂಡ ಇನಿಂಗ್ಸ್ ಹಾಗೂ 239 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು. ಈ ಸಾಧನೆಯ ಮೂಲಕ ಪೂಜಾರ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಪೂಜಾರ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ರಾಂಚಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ನಂತರ ಎರಡನೇ ಬಾರಿ ದ್ವಿತೀಯ ಸ್ಥಾನಕ್ಕೇರಿದ್ದರು. ಆಗಸ್ಟ್‌ನಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 133 ರನ್ ಗಳಿಸುವ ಮೂಲಕ ಮೊದಲ ಬಾರಿ ಎರಡನೇ ಸ್ಥಾನಕ್ಕೇರಿದ್ದರು. ನಾಗ್ಪುರ ಟೆಸ್ಟ್‌ನ ನಂತರ 22 ಅಂಕವನ್ನು ಗಳಿಸಿರುವ ಪೂಜಾರ ಜೀವನಶ್ರೇಷ್ಠ 888 ಅಂಕ ಗಳಿಸಿ ನಾಲ್ಕರಿಂದ ಎರಡನೇ ಸ್ಥಾನಕ್ಕೇರಿದ್ದಾರೆ.
29ರ ಹರೆಯದ ಪೂಜಾರ ಐದನೇ ರ್ಯಾಂಕಿನಲ್ಲಿರುವ ಕೊಹ್ಲಿಗಿಂತ 11 ಅಂಕದಿಂದ ಮುಂದಿದ್ದಾರೆ. ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ ಐದನೆ ಬಾರಿ ದ್ವಿಶತಕ ಬಾರಿಸಿರುವ ಹಿನ್ನೆಲೆಯಲ್ಲಿ ಅವರ ರೇಟಿಂಗ್ ಪಾಯಿಂಟ್ಸ್ 817 ರಿಂದ 877ಕ್ಕೆ ಏರಿಕೆಯಾಗಿದೆ.
ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ 21ನೇ ಶತಕ(ಅಜೇಯ 141) ಸಿಡಿಸಿದ್ದ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ತನ್ನ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು. ಈ ಪ್ರದರ್ಶನದ ಮೂಲಕ ಸ್ಮಿತ್ ಐದು ಅಂಕವನ್ನು ಗಳಿಸಿದ್ದು ಒಟ್ಟು 941 ಅಂಕ ಕಲೆ ಹಾಕಿ ನಂ.1 ಸ್ಥಾನದಲ್ಲಿ ಮುಂದುವರಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಮೂರನೇ ಹಾಗೂ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಡೇವಿಡ್ ವಾರ್ನರ್ 6ನೇ ರ್ಯಾಂಕಿನಲ್ಲಿದ್ದು, 5ನೇ ರ್ಯಾಂಕಿನಲ್ಲಿರುವ ಕೊಹ್ಲಿಗಿಂತ 51 ಅಂಕ ಹಿಂದಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ರವೀಂದ್ರ ಜಡೇಜ ದ್ವಿತೀಯ ಸ್ಥಾನಕ್ಕೆ ವಾಪಸಾಗಿದ್ದಾರೆ. ನಾಗ್ಪುರ ಟೆಸ್ಟ್‌ನಲ್ಲಿ 84 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿರುವ ಜಡೇಜ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯದ ವೇಗಿ ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್ ವಿರುದ್ಧ 128 ರನ್‌ಗೆ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ 10ನೇ ಸ್ಥಾನಕ್ಕೆ ಮರಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 300 ವಿಕೆಟ್‌ಗಳನ್ನು ಪೂರೈಸಿದ್ದ ಆರ್.ಅಶ್ವಿನ್ 9 ಅಂಕವನ್ನು ಗಳಿಸುವುದರೊಂದಿಗೆ ನಾಲ್ಕನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಅಶ್ವಿನ್ ಮೂರನೇ ಸ್ಥಾನಕ್ಕೆ ವಾಪಸಾಗಿದ್ದಾರೆ. ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ.







