ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
ರಣಜಿ: ಕ್ವಾರ್ಟರ್‌ಫೈನಲ್‌ನಲ್ಲಿ ವಿನಯ್ ಪಡೆಗೆ ಮುಂಬೈ ಎದುರಾಳಿ
ಹೊಸದಿಲ್ಲಿ, ನ.28: ಆಫ್-ಸ್ಪಿನ್ನರ್ ಕೃಷ್ಣಪ್ಪ ಗೌತಮ್(7-72) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯವನ್ನು 209 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.
ಕರ್ನೈಲ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದ ನಾಲ್ಕನೆ ದಿನವಾದ ಮಂಗಳವಾರ ಭರ್ಜರಿ ಜಯ ಸಾಧಿಸಿರುವ ಕರ್ನಾಟಕ ತಂಡ ಸತತ 4ನೇ ಜಯ ಸಾಧಿಸಿ ಒಟ್ಟು 32 ಅಂಕ ಗಳಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ವಿನಯ್‌ಕುಮಾರ್ ಪಡೆ ಕ್ವಾರ್ಟರ್ ಫೈನಲ್‌ನಲ್ಲಿ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಮುಂಬೈ ತಂಡವನ್ನು ಎದುರಿಸಲಿದೆ.
ಮಾಯಾಂಕ್ ಅಗರವಾಲ್ ಈ ಋತುವಿನಲ್ಲಿ ಗಳಿಸಿದ ಐದನೇ ಶತಕದ ನೆರವಿನಿಂದ ಕರ್ನಾಟಕ ತಂಡ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 275 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ರೈಲ್ವೇಸ್ ತಂಡದ ಗೆಲುವಿಗೆ 377 ರನ್ ಗುರಿ ನಿಗದಿಪಡಿಸಿತು. ನಾಲ್ಕನೇ ಹಾಗೂ ಅಂತಿಮದಿನವಾದ ಮಂಗಳವಾರ ರೈಲ್ವೇಸ್ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಸವಾಲಾಗಿ ಪರಿಣಮಿಸಿದರು. ಗೌತಮ್ ಏಳು ಬ್ಯಾಟ್ಸ್ ಮನ್‌ಗಳನ್ನು ಎಲ್ಬಿಡಬ್ಲು ಹಾಗೂ ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು. ಪಂದ್ಯದಲ್ಲಿ 142 ರನ್‌ಗೆ 10 ವಿಕೆಟ್‌ಗಳನ್ನು ಕಬಳಿಸಿ ಜೀವನಶ್ರೇಷ್ಠ ಬೌಲಿಂಗ್ ಸಂಘಟಿಸಿದರು. ಪ್ರಥಮ್ ಸಿಂಗ್ 36 ರನ್ ಗಳಿಸಿ ರೈಲ್ವೇಸ್ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.
14ನೇ ಓವರ್‌ನಲ್ಲಿ ಶಿವಕಾಂತ್ ಶುಕ್ಲಾ(13) ಅವರನ್ನು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಗೌತಮ್ ರೈಲ್ವೇಸ್ ಬ್ಯಾಟಿಂಗ್ ಪತನಕ್ಕೆ ನಾಂದಿ ಹಾಡಿದರು. ರೈಲ್ವೇಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಿರಂತರವಾಗಿ ಕಾಡಿದ ಗೌತಮ್ ದೊಡ್ಡ ಜೊತೆಯಾಟ ನಡೆಯದಂತೆ ನೋಡಿಕೊಂಡರು.
ರೈಲ್ವೇಸ್ 99 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗೌತಮ್‌ಗೆ ಸಮರ್ಥ ಸಾಥ್ ನೀಡಿದ ಇನ್ನೋರ್ವ ಸ್ಪಿನ್ನರ್ ಎಸ್.ಗೋಪಾಲ್(2-59) ರೈಲ್ವೇಸ್ ತಂಡವನ್ನು 63 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.
ಈ ಋತುವಿನಲ್ಲಿ 1 ತ್ರಿಶತಕ, 4 ಶತಕಗಳ ಸಹಿತ ಒಟ್ಟು 1,064 ರನ್ ಗಳಿಸಿರುವ ಮಾಯಾಂಕ್ ಅಗರವಾಲ್ 104 ರನ್‌ನಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿದರು. ದಿನದ 9ನೇ ಓವರ್‌ನಲ್ಲಿ 134 ರನ್ ಗಳಿಸಿದ್ದಾಗ ವಿನಿತ್ ಧುಲಪ್‌ಗೆ ವಿಕೆಟ್ ಒಪ್ಪಿಸಿದರು.
ಮಾಯಾಂಕ್ ಔಟಾಗಿ 5 ಓವರ್‌ಗಳ ಬಳಿಕ ಕರ್ನಾಟಕ 4 ವಿಕೆಟ್‌ಗಳ ನಷ್ಟಕ್ಕೆ 275 ರನ್‌ಗೆ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿತು. ಕರುಣ್ ನಾಯರ್ ಅಜೇಯ 20 ರನ್ ಗಳಿಸಿದ್ದರು. ಔಟಾಗದೇ 41 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ನಿಶ್ಚಲ್ ನಿನ್ನೆಯ ಮೊತ್ತಕ್ಕೆ 4 ರನ್ ಸೇರಿಸಿ ಕರಣ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.







