ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸನ್ನದ್ಧ: ಶ್ರೀರಂಗಯ್ಯ
ದತ್ತ ಜಯಂತಿ, ಮೀಲಾದುನ್ನಬಿ ಹಿನ್ನೆಲೆ
ಚಿಕ್ಕಮಗಳೂರು, ನ.28: ದತ್ತ ಜಯಂತಿ ಹಾಗೂ ಮೀಲಾದುನ್ನಬಿ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದ್ದಾರೆ.
ಅವರು ಮಂಗಳವಾರ ಎಸ್ಪಿಕಚೇರಿ ಸಭಾಂಗಣದಲ್ಲಿ ಎಸ್ಪಿಕೆ.ಅಣ್ಣಾಮಲೈ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘಪರಿವಾರದವರು ಜಿಲ್ಲಾದ್ಯಂತ ನಡೆಸಲು ಉದ್ದೇಶಿಸಿರುವ ರಥಯಾತ್ರೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಡಿ.1ರಂದು ಮಹಿಳೆಯರಿಂದ ನಗರದಲ್ಲಿ ಸಂಕೀರ್ತನಾ ಯಾತ್ರೆ ಮತ್ತು ಬಾಬಾ ಬುಡಾನ್‌ಗಿರಿಯಲ್ಲಿ ಅನುಸೂಯ ಜಯಂತಿ ನಡೆಯಲಿದೆ. ಡಿ.2ರಂದು ಮುಸ್ಲಿಮರು ನಗರದಲ್ಲಿ ಮೀಲಾದುನ್ನಬಿ ಮೆರವಣಿಗೆಯನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯವರೆಗೆ ನಡೆಸಲಿದ್ದಾರೆ. ಮಧ್ಯಾಹ್ನ 3ಗಂಟೆಯ ಬಳಿಕ ಬಜರಂಗದಳ ಕಾರ್ಯಕರ್ತರು ಶೋಭಾಯಾತ್ರೆ ನಡೆಸಲಿದ್ದಾರೆ. ಡಿ.3ರಂದು ಬಾಬಾ ಬುಡಾನ್‌ಗಿರಿಯಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈವರೆಗೆ ಶಾಂತಿ ಸಮಿತಿ ಸಭೆಗಳನ್ನು ನಡೆಸಲಾಗಿವೆ. ಮುಸ್ಲಿಮರು ಮೀಲಾದುನ್ನಬಿ ಮೆರವಣಿಗೆಯನ್ನು ಡಿ.2ರಂದು ಮಧ್ಯಾಹ್ನ ನಡೆಸಲು ಅನುಮತಿ ಕೋರಿದ್ದರು. ಆದರೆ, ಅದೇ ಸಮಯಕ್ಕೆ ಶೋಭಾಯಾತ್ರೆ ಮೆರವಣಿಗೆ ಇರುವುದರಿಂದ, ಮಾತುಕತೆ ನಡೆಸಿ, ಮೀಲಾದುನ್ನಬಿ ಮೆರಣಿಗೆಯನ್ನು ಬೆಳಗ್ಗೆ ನಡೆಸಲು ಮತ್ತು ಶೋಭಾಯಾತ್ರೆಯನ್ನು ಮಧ್ಯಾಹ್ನ ನಡೆಸಲು ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸರಿಗೆ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ಸಹಾಯಕವಾಗುವಂತೆ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಒಟ್ಟು 48 (34 + 14 ಮೀಸಲು) ಮಂದಿ ಕಾರ್ಯಕಾರಿ ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಉಪವಿಭಾಗ/ತಾಲೂಕು ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ನ.30ರ ಮಧ್ಯರಾತ್ರಿುಂದ ಡಿ.3ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ/ಸಾಗಣೆೆ ಮಾಡುವುದು ನಿಷೇಧಿಸಲಾಗಿದೆ. ಕಲಂ 35 ಮತ್ತು 39 ಕರ್ನಾಟಕ ಪೊಲೀಸ್ ಆಕ್ಟ್ ಅಡಿ ಕಾರ್ಯಕ್ರಮದ ಆಯೋಜಕರು ಶಾಂತಿ ಕಾಪಾಡುವ ಕುರಿತು ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
ಕಳೆದ ವರ್ಷಗಳಲ್ಲಿ ದತ್ತಜಯಂತಿ ವೇಳೆಯಲ್ಲಿ ಶಾಂತಿ ಭಂಗ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿಗೆ ಸೇರಿದ 28 ಜನರಿಂದ ಸಂಬಂಧಪಟ್ಟ ತಹಶೀಲ್ದಾರ್‌ಗಳ ಮುಖಾಂತರ ರೂ. 5 ಲಕ್ಷಕ್ಕೆ ಬಾಂಡ್ ಪಡೆದುಕೊಳ್ಳಲಾಗಿದೆ. ಬ್ಯಾನರ್ಸ್, ಫ್ಲೆಕ್ಸ್, ಬಂಟಿಂಗ್ಸ್, ಪೋಸ್ಟರ್ಸ್, ಧ್ವಜಗಳಿಗೆ ಅನುಮತಿಯನ್ನು ನೀಡಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಅಧಿಕಾರವನ್ನು ನೀಡಿ ಆದೇಶವನ್ನು ಹೊರಡಿಸಿದ್ದಾರೆ. ಮತೀಯ ಗೂಂಡಾ ಮತ್ತು ರೌಡಿಗಳು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಸದೇ ಇರುವಂತೆ ಅವರ ಮೇಲೆ ಕಾನೂನು ರೀತಿಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಅವರಿಂದ ರೂ. 1, 5, 10 ಲಕ್ಷಗಳಿಗೆ ಬಾಂಡ್‌ನ್ನು ಸಂಬಂಧಪಟ್ಟ ತಹಶೀಲ್ದಾರ್‌ಗಳ ಮೂಲಕ ಪಡೆದುಕೊಳ್ಳಲಾಗಿದೆ ಎಂದ ಅವರು, ಸಿಆರ್‌ಪಿಸಿ 107 ಪ್ರಕಾರ 982 ಪ್ರಕರಣಗಳು ಇದ್ದು, 1408 ಪ್ರಕರಣಗಳು ದಾಖಲಿಸಲಾಗಿದೆ. 108 ಸಿಆರ್‌ಪಿ ಪ್ರಕಾರ 4 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಿಆರ್‌ಪಿಸಿ 110 ರ ಪ್ರಕಾರ 3 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ಗಿರಿಯ ಸುತ್ತ 21 ಸಿಸಿ ಟಿವಿ ಕಣ್ಗಾವಲು: ಬಾಬಾಬುಡಾನ್ ಗಿರಿಯ ಒಟ್ಟು 21 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಗರದಲ್ಲಿ 10 ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ, ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿಯೂ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಮೀಲಾದುನ್ನಬಿ ಮತ್ತು ದತ್ತಜಯಂತಿ ಪ್ರಯುಕ್ತ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಓರ್ವ ಎಸ್ಪಿ, 3 ಹೆಚ್ಚುವರಿ ಎಸ್ಪಿ, 10 ಡಿವೈಎಸ್‌ಪಿ, 30 ವೃತ್ತ ನಿರೀಕ್ಷಕರು, 134 ಪಿಎಸ್‌ಐ, 227 ಎಎಸ್ಸೈ, ಪೇದೆಗಳು ಮತ್ತು ಹೋಂಗಾರ್ಡ್‌ಗಳು ಸೇರಿ ಒಟ್ಟು 2000 ಸಿಬಂದಿ ಹಾಗು , ಡಿಎಆರ್ 20 ತುಕಡಿ ಹಾಗೂ ಕೆಎಸ್‌ಆರ್‌ಪಿ 16 ತುಕಡಿಗಳು ಬಂದೋಬಸ್ತ್‌ನಲ್ಲಿ ಕರ್ತವ್ಯ ನಿರ್ವಹಿಸಲಿವೆ.
- ಶ್ರೀರಂಗಯ್ಯ, ಜಿಲ್ಲಾಧಿಕಾರಿ







