'ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಶೋಭಾ ಕರಂದ್ಲಾಜೆ ಕೋಟ್ಯಂತರ ರೂ. ಸಂಪಾದಿಸಿದ್ದು ಹೇಗೆ'
ಶೋಭಾ ಕರಂದ್ಲಾಜೆ ವಿರುದ್ಧ ತೀ.ನಾ.ಶ್ರೀನಿವಾಸ್ ವಾಗ್ದಾಳಿ
ಶಿವಮೊಗ್ಗ, ನ. 28: ‘ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಶೋಭಾ ಕರಂದ್ಲಾಜೆಯವರು ಕೋಟ್ಯಂತರ ರೂ. ಸಂಪಾದಿಸಿದ್ದು ಹೇಗೆ ಎಂಬುವುದು ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಶೋಭಾ ಕರಂದ್ಲಾಜೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶೋಭಾ ಅವರು ಕಾಂಗ್ರೆಸ್ ನಾಯಕರ ಬಗ್ಗೆ ಕೀಳುಮಟ್ಟದ ಹೇಳೀಕೆ ನೀಡುವುದನ್ನು ನಿಲ್ಲಿಸಬೇಕು. ಬಿಜೆಪಿ ನಾಯಕರು ಪರಿವರ್ತನೆ ಯಾತ್ರೆಯಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ. ಅತಿ ಕೆಳಮಟ್ಟದ ಪದಗಳನ್ನು ಬಳಸುತ್ತಿದ್ದಾರೆ. ತಮ್ಮ ಮಾತಿನಮೇಲೆ ಹಿಡಿತವಿಲ್ಲದಂತೆ ವರ್ತಿಸುತ್ತಿದ್ದಾರೆ. ತಮ್ಮ ಭ್ರಷ್ಟ ಮನಸ್ಸಿನ ಪರಿವರ್ತನೆ ತೋರ್ಪಡಿಸುತ್ತಿದ್ದಾರೆ ಎಂಧು ಟೀಕಿಸಿದರು.
ಜೆಡಿಎಸ್ ಕುಟುಂಬ ರಾಜಕಾರಣ ಬಿಟ್ಟು ಹೊರಬರಲು ಸಾಧ್ಯವಿಲ್ಲ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದೆ. ಸಮಯ ಸಾಧಕತನ ಮಾಡುತ್ತಿರುವ ಜೆಡಿಎಸ್ ನಾಯಕರು ಕಾಂಗ್ರೆಸನ್ನು ಟೀಕಿಸುವ ಅರ್ಹತೆ ಹೊಂದಿಲ್ಲ. ಆ ನೈತಿಕತೆಯೂ ಅದರ ಮುಖಂಡರಿಗಿಲ್ಲ ಎಂದು ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೊಂದಣಿ: ಮುಂಬರುವ ವಿಧಾನಪರಿಷತ್ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ 2018ರ ಜೂನ್‌ನಲ್ಲಿ ನಡೆಯಲಿದೆ. ಸದ್ಯ 48 ಸಾವಿರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಐದು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಎರಡು ತಾಲೂಕುಗಳು ಸೇರಿದಂತೆ ಒಟ್ಟು 29 ವಿಧಾನಸಭಾ ಕ್ಷೇತ್ರಗಳು ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಬರಲಿವೆ. ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದರು.
ಶಿವಮೊಗ್ಗ ಜಿಲ್ಲೆಯಿಂದ 21,428, ಹೊನ್ನಾಳಿ ಮತ್ತು ಚನ್ನಗಿರಿಯಿಂದ 5,700, ಚಿಕ್ಕಮಗಳೂರಿನಿಂದ 5,100, ಉಡುಪಿಯಿಂದ 4,900, ಮಂಗಳೂರಿನಿಂದ 10,158 ಮತ್ತು ಕೊಡಗಿನಿಂದ 853 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ನ.21ರಿಂದ ಎರಡನೆಯ ಹಂತದ ನೋಂದಣಿ ಆರಂಭವಾಗಿದೆ. ಇದರಲ್ಲಿ ಪದವೀಧರರು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಎಂಎಲ್‌ಸಿ ಆರ್. ಪ್ರಸನ್ನ ಕುಮಾರ್, ಮುಖಂಡರಾದ ಕಾಶಿ ವಿಶ್ವನಾಥ್, ಎಚ್.ಸಿ. ಯೋಗೇಶ್, ಕೆ. ರಂಗನಾಥ್, ಇಸ್ಮಾಯಿಲ್ ಖಾನ್, ಕಲಗೋಡು ರತ್ನಾಕರ್, ಕೆ. ದೇವೇಂದ್ರಪ್ಪ, ಆರೀಫುಲ್ಲಾ, ಪ್ರವೀಣ್‌ಕುಮಾರ್ ಇದ್ದರು.







