ಮಾನಹಾನಿಕಾರಕ ವರದಿ ಪ್ರಸಾರ: ಟಿ ವಿ ಚಾನೆಲ್‌ಗಳ ವಿರುದ್ಧ ಕೇಸು ದಾಖಲಿಸಿದ ಪಿಎಫ್ಐ
ಹೊಸದಿಲ್ಲಿ, ನ. 28: ಪಿಎಫ್ಐ ಸಂಘಟನೆಯ ವಿರುದ್ಧ ಆಧಾರ ರಹಿತ ಸುಳ್ಳು ವರದಿಯನ್ನು ಪ್ರಕಟಿಸಿದ ಇಂಡಿಯಾ ಟುಡೆ, ಆಜ್‌ತಕ್ ಮತ್ತು ಟೈಮ್ಸ್‌ನೌ ವಿರುದ್ಧ ನ್ಯಾಯಮೂರ್ತಿ ಆರ್.ವಿ ರವೀಂದ್ರನ್ ನೇತೃತ್ವದ ಸ್ವಯಂ ನಿಯಂತ್ರಣ ಸಂಸ್ಥೆಯಾದ ನ್ಯಾಶನಲ್ ಬ್ರಾಡ್ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಗೆ ಪಾಪ್ಯುಲರ್ ಫ್ರಂಟ್ಆಫ್ ಇಂಡಿಯಾವು ದೂರು ನೀಡಿದೆ.
ಇಂಡಿಯಾ ಟುಡೆ, ಆಜ್‌ತಕ್ ಮತ್ತು ಟೈಮ್ಸ್‌ನೌ ಚಾನೆಲ್‌ಗಳು ನಿರಂತರವಾಗಿ ಆಧಾರರಹಿತ, ಕಪೋಲ ಕಲ್ಪಿತ ಪೂರ್ವಗ್ರಹ ಪೀಡಿತ ಸುಳ್ಳು ವರದಿಗಳನ್ನು ಜನತೆಯ ಮುಂದಿಟ್ಟು ಜನರನ್ನು ದಾರಿತಪ್ಪಿಸಿ, ಆ ಮೂಲಕ ಸಂಘಟನೆಯ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದೆ ಎಂದು ತನ್ನ ದೂರಿನಲ್ಲಿ ತಿಳಿಸಿದೆ.
ನ್ಯಾಶನಲ್ ಬ್ರಾಡ್ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಸಂಸ್ಥೆಯ ಅಧೀನದ ನ್ಯೂಸ್ ಬ್ರಾಡ್ಕಾಸ್ಟರ್ ಅಸೋಶಿಯೆಶನ್ (NBA ) ತನ್ನ ಸದಸ್ಯತ್ವ ಹೊಂದಿದ ಎಲ್ಲಾ ಚಾನೆಲ್‌ಗಳಿಗೆ ಜವಾಬ್ದಾರಿಯುತ ಹೇಳಿಕೆ, ಸುಳ್ಳು ವರದಿಗಳ ಮೇಲೆ ನಿಯಂತ್ರಣ, ಜನತೆಯ ದಾರಿ ತಪ್ಪಿಸುವ ಸಂದೇಶ ಹಾಗೂ ವರದಿಗಳ ಮೇಲೆ ನಿಯಂತ್ರಣವನ್ನು ವಿಧಿಸುತ್ತದೆ ಮತ್ತು ಆರೋಪಿಗಳನ್ನು ಅಪರಾಧಿಗಳಾಗಿ ಚಿತ್ರಿಸುವುದನ್ನು ತಡೆಯುತ್ತದೆ. ಆದರೆ ಇಂತಹ ಯಾವುದೇ ಕಾನೂನುಗಳನ್ನು ಮೇಲೆ ತಿಳಿಸಿದ ನ್ಯೂಸ್ ಚಾನೆಲ್‌ಗಳು ಪಾಪ್ಯುಲರ್ ಫ್ರಂಟ್ ವಿಚಾರ ಬಂದಾಗ ಪಾಲಿಸುವುದಿಲ್ಲ ಮತ್ತು ಸ್ವತಃ ತಾವೇ ಕಾನೂನಿನ ತೀರ್ಪುದಾರರು ಎಂಬ ರೀತಿಯಲ್ಲಿ ತನ್ನ ಏಕಪಕ್ಷೀಯವಾಗಿ ನಿಲುವನ್ನು ಪ್ರಕಟಿಸುತ್ತಿದ್ದು ಇದು ಅನ್ಯಾಯ, ಅನೈತಿಕ ಮತ್ತು ನೈರ್ಸಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ತಟಸ್ಥ ನಿಲುವನ್ನು ಕಾಪಾಡಿಕೊಳ್ಳುವ ಬದಲು ನಿರ್ದಿಷ್ಟ ಜನರ ಹಿತಾಸಕ್ತಿಯನ್ನು ಕಾಪಾಡುವ ಟಿ.ವಿ. ಮಾಧ್ಯಮಗಳ ರಾಜಕೀಯ ಪ್ರತಿಕಾರದಿಂದ ಸಂಘಟನೆಯ ಘನತೆಗೆ ಧಕ್ಕೆಯಾಗಿದೆ. ಇಂತಹ ಚಾನೆಲ್‌ಗಳು ಸಾರ್ವಜನಿಕರಲ್ಲಿ ಧರ್ಮಗಳ ಮಧ್ಯೆ ಪರಸ್ಪರ ಧ್ವೇಷವನ್ನು ಬಿತ್ತುತ್ತಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ಈ ಚಾನೆಲ್‌ಗಳ ವಿರುದ್ಧ ದೂರು ದಾಖಲಿಸುವ ಮೊದಲು ಪಾಪ್ಯುಲರ್ ಫ್ರಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ಜಿನ್ನಾ ಅವರು ಎರಡು ವಾರಗಳ ಹಿಂದೆ ಈ ಚಾನೆಲ್‌ಗಳಿಗೆ ಕ್ಷಮೆಯಾಚನೆಯನ್ನು ಪ್ರಸಾರ ಮಾಡಲು ಮತ್ತು ಸುಳ್ಳು ಆರೋಪಗಳನ್ನು ಹಿಂಪಡೆಯಲು ಪತ್ರಗಳನ್ನು ಕಳುಹಿಸಿದ್ದರು.
ಆದರೆ ಅವರು ಪ್ರತಿಕ್ರಿಯಿಸದೆ ಇದ್ದಾಗ ನ್ಯಾಶನಲ್ ಬ್ರಾಡ್ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಗೆ ದೂರು ದಾಖಲಿಸಲಾಯಿತು. ಸದ್ರಿ ಸಮಾಜದಲ್ಲಿ ಮಾಧ್ಯಮಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಲ್ಲಿ ಪೂರ್ವಗ್ರಹ ಅಭಿಪ್ರಾಯವನ್ನು ಹುಟ್ಟು ಹಾಕುವ ಮಾಧ್ಯಮ ವಿಚಾರಣೆಯನ್ನು ಯಾವುದೇ ಸಂವಿಧಾನವು ಅನುಮತಿಸುವುದಿಲ್ಲ. ಅನೈತಿಕತೆಯ, ಕೀಳುಮಟ್ಟದ ಸುಳ್ಳು ಪ್ರಚಾರಗಳನ್ನು ಮಾಡುವ ಮಾಧ್ಯಮಗಳ ವಿರುದ್ಧ ನಮ್ಮ ಕಾನೂನು ಹೋರಾಟವು ಮುಂದುವರಿಯುತ್ತದೆ ಎಂದು ಮುಹಮ್ಮದ್ ಅಲೀ ಜಿನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.







