ಬಡತನದ ಕಾರಣ ಭಿಕ್ಷೆ ಬೇಡಿದರೆ ಅಪರಾಧವಲ್ಲ: ಕೇಂದ್ರ ಸರಕಾರ

ಹೊಸದಿಲ್ಲಿ, ನ.28: ಬಡತನದ ಕಾರಣದಿಂದ ಓರ್ವ ವ್ಯಕ್ತಿ ಭಿಕ್ಷೆ ಬೇಡಿದರೆ ಅದು ಅಪರಾಧವಲ್ಲ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಭಿಕ್ಷಾಟನೆ ಅಪರಾಧ ಎಂಬ ಕಾನೂನನ್ನು ತಿದ್ದುಪಡಿಗೊಳಿಸಬೇಕು ಹಾಗೂ ಭಿಕ್ಷುಕರಿಗೆ ಮೂಲಭೂತ ಹಾಗೂ ಮಾನವ ಹಕ್ಕುಗಳನ್ನು ಒದಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ. ಕೇಂದ್ರ ಸರಕಾರದ ಹೇಳಿಕೆಗೆ ಅಚ್ಚರಿ ಸೂಚಿಸಿದ ಹೈಕೋರ್ಟ್, ಹಾಗಿದ್ದರೆ ಭಿಕ್ಷಾಟನೆಯನ್ನು ಒತ್ತಾಯಪೂರ್ವಕವಾಗಿ ಅಥವಾ ಇಚ್ಛಾಪೂರ್ವಕವಾಗಿ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿತು.
ಈಗ 20 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕ ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಹೊಂದಿವೆ ಅಥವಾ ಇತರ ರಾಜ್ಯಗಳ ಕಾಯ್ದೆಯನ್ನು ಅನುಸರಿಸುತ್ತಿವೆ . ಆದ್ದರಿಂದ ಭಿಕ್ಷಾಟನೆ ನಿಷೇಧ ಕಾಯ್ದೆಯಲ್ಲಿ ತಿದ್ದುಪಡಿ ನಡೆಸುವಾಗ ಸಂಬಂಧಿತ ರಾಜ್ಯಗಳ ಅಭಿಪ್ರಾಯ ಆಲಿಸುವ ಅಗತ್ಯವಿದೆ ಎಂದು ಕೇಂದ್ರ ಸರಕಾರ ತಿಳಿಸಿತು.
ಓರ್ವ ವ್ಯಕ್ತಿ ಬಡತನದ ಕಾರಣಕ್ಕೆ ಭಿಕ್ಷಾಟನೆ ಮಾಡುತ್ತಿದ್ದಾನೆಯೇ ಎಂಬುದನ್ನು ತಿಳಿಯಬೇಕಾದರೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿತು. ಭಿಕ್ಷಾಟನೆಯನ್ನು ಸಕ್ರಮಗೊಳಿಸಲಾಗುವುದು ಹಾಗೂ ಭಿಕ್ಷುಕರಿಗೆ ಮೂಲಭೂತ ಸವಲತ್ತು ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ಭರವಸೆ ನೀಡಿ ವರ್ಷ ಸಂದಿದೆ ಎಂದು ಹೈಕೋರ್ಟ್‌ನ ಪ್ರಭಾರ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರಿದ್ದ ಪೀಠ ತಿಳಿಸಿತು.
ಭಿಕ್ಷಾಟನೆ ಪ್ರಕರಣದ ಕುರಿತು ಈಗ ಬಹುತೇಕ ರಾಜ್ಯಗಳು ‘ದಿ ಬಾಂಬೆ ಪ್ರಿವೆನ್ಷನ್ ಆಫ್ ಬೆಗ್ಗಿಂಗ್ ಆ್ಯಕ್ಟ್, 1959’ ನ್ನು ಅನುಸರಿಸುತ್ತಿವೆ. ಈ ಕಾಯ್ದೆಯ ಪ್ರಕಾರ ಭಿಕ್ಷಾಟನೆ ನಡೆಸಿ ಸಿಕ್ಕಿಬಿದ್ದವರಿಗೆ ಪ್ರಥಮ ಬಾರಿಯಾದರೆ 3 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಮತ್ತೆ ಸಿಕ್ಕಿಬಿದ್ದವರಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ.







