ತೇಜಸ್ ಯುದ್ಧವಿಮಾನದಲ್ಲಿ ಹಾರಾಟವನ್ನು ‘ಅತ್ಯುತ್ತಮ’ಎಂದು ಹೊಗಳಿದ ಸಿಂಗಪುರದ ರಕ್ಷಣಾ ಸಚಿವ

ಹೊಸದಿಲ್ಲಿ,ನ.28: ಮಂಗಳವಾರ ಇಲ್ಲಿ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟದ ಅನುಭವ ಪಡೆದ ಸಿಂಗಾಪುರದ ರಕ್ಷಣಾ ಸಚಿವ ಡಾ.ಎನ್‌ಜಿ ಇಂಗ್ ಹೆನ್ ಅವರು, ತನ್ನ ಮೊದಲ ಹಾರಾಟ ‘ಅತ್ಯುತ್ತಮ ಮತ್ತು ಆಕರ್ಷಕ’ವಾಗಿತ್ತು ಎಂದು ಹೇಳಿದರು.
ಹೆನ್ ಈ ವಿಮಾನದಲ್ಲಿ ಹಾರಾಟ ಕೈಗೊಂಡ ಮೊದಲ ವಿದೇಶಿ ನಾಗರಿಕರಾಗಿದ್ದಾರೆ. ಜಂಟಿ ಮಿಲಿಟರಿ ತರಬೇತಿ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಅವರು ಕಲೈಕುಂಡಾ ವಾಯುನೆಲೆಯಿಂದ ಹೊರಟು ಅರ್ಧ ಗಂಟೆ ಹಾರಾಟವನ್ನು ನಡೆಸಿದರು.
‘‘ಭಾರತವು ದೇಶೀಯವಾಗಿ ವಿನ್ಯಾಸಗೊಳಿಸಿ ತಯಾರಿಸಿರುವ ವಿಮಾನದಲ್ಲಿ ಹಾರಾಟಕ್ಕೆ ಅವಕಾಶ ದೊರಕಿದ್ದು ನನಗೆ ನೀಡಿರುವ ವಿಶೇಷ ಗೌರವವಾಗಿದೆ. ಇದು ತುಂಬ ಒಳ್ಳೆಯ ವಿಮಾನ’’ ಎಂದು ಹೆನ್ ಅವರನ್ನು ಉಲ್ಲೇಖಿಸಿ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದರು.
ತನ್ನ ಮೂರು ದಶಕಗಳ ಫಲವಾಗಿ ರೂಪುಗೊಂಡಿರುವ ತೇಜಸ್ ಲಘು ಯುದ್ಧ ವಿಮಾನಕ್ಕಾಗಿ ಭಾರತವು ವಿದೇಶಿ ಮಾರುಕಟ್ಟೆಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಹೆನ್ ಅವರ ಈ ಪ್ರಶಂಸೆಯು ಉತ್ತೇಜನಕಾರಿಯಾಗಿದೆ.
ತೇಜಸ್‌ನ್ನು ಚಲಾಯಿಸಿದ ಏರ್ ವೈಸ್ ಮಾರ್ಷಲ್ ಎ.ಪಿ.ಸಿಂಗ್ ಅವರನ್ನು ಶ್ಲಾಘಿಸಿದ ಹೆನ್, ಅವರ ಚಾಲನೆಯು ತನಗೆ ಯುದ್ಧವಿಮಾನದ ಬದಲು ಕಾರಿನಲ್ಲಿ ಪ್ರಯಾಣಿಸಿದ ಅನುಭವವನ್ನು ನೀಡಿತ್ತು ಎಂದರು.
ತೇಜಸ್ ಖರೀದಿಗೆ ಸಿಂಗಾಪುರ ಆಸಕ್ತಿ ಹೊಂದಿದೆಯೇ ಎಂಬ ಪ್ರಶ್ನೆಗೆ, ತಾನು ಪೈಲಟ್ ಅಲ್ಲ ಮತ್ತು ಆ ಬಗ್ಗೆ ನಿರ್ಧಾರವನ್ನು ತಂತ್ರಜ್ಞರು ತೆಗೆದುಕೊಳ್ಳಬೇಕು ಎಂದು ಅವರು ಉತ್ತರಿಸಿದರು.
ಸಿಂಗಾಪುರ ತೇಜಸ್ ವಿಮಾನದಲ್ಲಿ ಆಸಕ್ತಿಯನ್ನು ತೋರಿಸಿದೆ ಎಂದು ಭಾರತೀಯ ರಕ್ಷಣಾ ಮೂಲಗಳು ತಿಳಿಸಿವೆ.
ಹೆನ್ ಅವರು ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.







