ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖ: ವೇದಮೂರ್ತಿ
ಶಿವಮೊಗ್ಗ, ನ.28: ವೀರಶೈವ-ಲಿಂಗಾಯಿತ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಇದನ್ನು ಪ್ರತ್ಯೇಕಿಸುವುದು ಅಸಾಧ್ಯ. ್ರಸ್ತುತ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಕೈಬಿಡಬೇಕು. ಸಮುದಾಯದ ಎಲ್ಲ ಮಠಾಧೀಶರು, ಮುಖಂಡರು ಒಟ್ಟಾಗಿ ಕುಳಿತು ಚರ್ಚಿಸಿ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ವೇದಮೂರ್ತಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು, ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಹೇಳುತ್ತಾ ಸಮಾಜ ಬಾಂಧವರಲ್ಲಿ ವಿಷ ಬೀಜ ಬಿತ್ತಲೆತ್ನಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಇದು ಸಮಾಜದ ಒಗ್ಗಟ್ಟು ಒಡೆಯುವ ಹುನ್ನಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಜಾಮ್‌ದಾರ್ ಹೋರಾಟದ ನಿಲುವು ಸರಿಯಲ್ಲ. ಏಕಾಏಕಿ ಅವರು ಈ ಹೋರಾಟಕ್ಕೆ ಧುಮುಕಿದ್ದೆ ಅಚ್ಚರಿ ಉಂಟು ಮಾಡಿದೆ. ಅವರು ಸಮಾಜ ಸಂಘಟಿಸುವ ಕೆಲಸ ಮಾಡಬೇಕೇ ವಿನಃ, ವಿಘಟಿಸುವ ಕೆಲಸ ಮಾಡಬಾರದು ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಕೆಲ ಮಠಾಧೀಶರು ಸಭ್ಯತೆಯ ಎಲ್ಲೆ ಮೀರಿ, ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಶೋಚನೀಯ ವಿಷಯವಾಗಿದೆ. ಮಠಾಧೀಶರು ಸಂಯಮ ಕಾಪಾಡಿಕೊಳ್ಳಬೇಕಾಗಿದೆ. ಭಕ್ತರಿಗೆ ಸರಿ ಮಾರ್ಗ ತೋರಿಸಬೇಕಾದವರೇ ತಪ್ಪು ಹಾದಿ ಹಿಡಿಯುವುದು ಸರಿಯಲ್ಲ ಎಂದು ಸೂಚ್ಯವಾಗಿ ಹೇಳಿದರು.







