ಉಳ್ಳಾಲ ನಗರಸಭೆ: ಸಾಮಾನ್ಯ ಸಭೆಯಲ್ಲಿ ಗದ್ದಲ

ಉಳ್ಳಾಲ,ನ.29 : ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯ ಆರಂಭದಲ್ಲಿಯೇ ನಗರಸಭೆಯ 25ನೇ ವಾರ್ಡ್‍ಗೆ 50 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಧ್ಯಕ್ಷರು ಮಂಜೂರಾತಿ ನೀಡಿದ ಬಗ್ಗೆ ಸಭೆಯಲ್ಲಿ ತೀವೃ ಚರ್ಚೆಗೆ ಕಾರಣವಾಗಿ ಬಳಿಕ ಅಧ್ಯಕ್ಷರ ವಿರುದ್ಧ ಪ್ರತಿಪಕ್ಷದ ಜೊತೆ ಆಡಳಿತ ಪಕ್ಷದ ಸದಸ್ಯರೂ ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು, ಅಧ್ಯಕ್ಷರು ನೀಡಿದ ಉತ್ತರ ಗೊಂದಲದಿಂದ ಕೂಡಿದ್ದರಿಂದ ಆಕ್ರೋಶಿತ ಪ್ರತಿಪಕ್ಷ ಸದಸ್ಯರ ಧಿಕ್ಕಾರದ ಧರಣಿ ಮಧ್ಯೆ ಸಾಮಾನ್ಯ ಸಭೆ ಕೇವಲ 45 ನಿಮಿಷದಲ್ಲೇ ಮುಗಿಯಿತು.
ಆರಂಭದಲ್ಲಿ ಪ್ರತಿಪಕ್ಷ ಸದಸ್ಯ ಇಸ್ಮಾಯಿಲ್ ಪೊಡಿಮೋನು ಆಕ್ಷೇಪ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯ ಅಬ್ದುಲ್ ಫತಾಕ್, ಅಶ್ರಫ್ ಬಾವ ಹಾಗೂ ಪಕ್ಷೇತರ ಸದಸ್ಯ ಯು.ಎಚ್.ಫಾರೂಕ್ ಧ್ವನಿಗೂಡಿಸಿದರು. ಯಾವುದೇ ವಾರ್ಡ್ ಅಭಿವೃದ್ಧಿಗೆ 50 ಕೋಟಿ ಬಂದರೂ ಸಂತೋಷವೇ. ಆದರೆ ಹಿಂದಿನ ಸಭೆಯಲ್ಲಿ ಬಾರದ ವಿಚಾರ ನಿರ್ಣಯವಾಗುವುದಾದರೆ ಅಂತಹ ಅಧಿಕಾರ ಅಧ್ಯಕ್ಷರಿಗೆ ಕೊಟ್ಟವರಾರರು ಎನ್ನುವುದು ಸದಸ್ಯರ ಪ್ರಶ್ನೆಯಾಯಿತು.
ಈ ವಿಚಾರದಲ್ಲಿ ಭಾರೀ ಗದ್ದಲವೇ ನಡೆಯಿತು. ಈ ಸಂದರ್ಭ ಆಡಳಿತ ಪಕ್ಷದ ಸದಸ್ಯ ದಿನೇಶ್ ರೈ ಮಾತನಾಡಿ, ಅನುದಾನ ನೀಡಿರುವ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ, ಆದರೆ ನಿರ್ಣಯದ ವಿಚಾರದಲ್ಲಿ ಗೊಂದಲ ಉಂಟಾಗಿದೆ, ಆದರೆ ಹಿಂದಿನ ಸಭೆಗಳಲ್ಲಿ ಕೋಟಿ ಅನುದಾನಕ್ಕೂ ಮಂಜೂರು ಮಾಡಿದ ಇತಿಹಾಸವಿದೆ. ಅದೇ ರೀತಿ ಇದನ್ನೂ ತೆಗೆದುಕೊಂಡು ಮುನ್ನಡೆಯಬೇಕು. ಎಲ್ಲವನ್ನೂ ಕಾನೂನಿನಂತೆ ಕೊಂಡುಹೋಗುವುದು ಅಸಾಧ್ಯ ಎಂದು ಹೇಳಿದರು. ಅವರ ಮಾತಿಗೆ ಮುಸ್ತಫಾ ಅಬ್ದುಲ್ಲಾ ಧ್ವನಿಗೂಡಿಸಿದರು. ಸರ್ಕಾರದ ಆದೇಶದಂತೆ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ ಎಂದು ಅಧ್ಯಕ್ಷ ಹುಸೈನ್ ಕುಂಞಿಮೋನು ತಿಳಿಸಿದರು.
ಧರಣಿಯೊಂದಿಗೆ ಧಿಕ್ಕಾರ!
ಆದರೂ ಸಮಾಧಾನಗೊಳ್ಳದ ಪ್ರತಿಪಕ್ಷ ಸದಸ್ಯರು ನೇರವಾಗಿ ಸದನದ ಬಾವಿಗೆ ಬಂದು ಧರಣಿ ಕುಳಿತರು. ವಾದ-ಪ್ರತಿವಾದ ನಡೆಯುತ್ತಿದ್ದಂತೆಯೇ ಫತಾಕ್ ಹಾಗೂ ಅಶ್ರಫ್ ಅವರು ಹಿಂದಿನ ವಿಚಾರ ಪ್ರಸ್ತಾಪಿಸಿದರು. ಇದನ್ನೇ ಹಿಡಿದುಕೊಂಡ ಪ್ರತಿಪಕ್ಷದ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಲು ಆರಂಭಿಸಿದರು. ಈ ನಡುವೆಯೇ ಅನುದಾನ ಮಂಜೂರಾತಿಗೆ ಏಳು ಸದಸ್ಯರ ವಿರೋಧ ದಾಖಲಿಸಲು ನಿರ್ಣಯಿಸಲಾಯಿತು.
ಸಭೆಯ ಆರಂಭದಲ್ಲೇ ನಾಮನಿರ್ದೇಶಿತ ಸದಸ್ಯರ ಜವಾಬ್ದಾರಿ ಬಗ್ಗೆ ಒಂದಷ್ಟು ಚರ್ಚೆಯಾಯಿತು.







