‘ಪದ್ಮಾವತಿ’ ಬಗ್ಗೆ ಹೇಳಿಕೆ ಬೇಡ: ರಾಜಕೀಯ ನಾಯಕರಿಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ನ.29: ‘ಪದ್ಮಾವತಿ ’ ಸಿನೆಮಕ್ಕೆ ಸೆನ್ಸಾರ್ ಇನ್ನೂ ಪ್ರಮಾಣಪತ್ರ ನೀಡಿಲ್ಲ. ಆದ್ದರಿಂದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಮುಖಂಡರು ಪದ್ಮಾವತಿ ಸಿನೆಮದ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಿನೆಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಜನರಿಗಿದೆ. ಈ ಬಗ್ಗೆ ನಾವು ಹೇಳುತ್ತಿಲ್ಲ. ಆದರೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳು ಸಿನೆಮಾದ ಕುರಿತು ಹೇಳಿಕೆ ನೀಡುವ ಅಗತ್ಯವೇನಿದೆ. ಹೀಗೆ ಹೇಳಿಕೆ ನೀಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಪ್ರತಿಯೊಬ್ಬರೂ ಸಂಯುಕ್ತ ಸಮಾಜದ ಸೂತ್ರವನ್ನು ಪಾಲಿಸಬೇಕು. ವೈಷಮ್ಯ ಹುಟ್ಟುಹಾಕುವ ಪ್ರಕ್ರಿಯೆಗಳಿಗೆ ಅಂತ್ಯಹೇಳಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿದರೂ ‘ಪದ್ಮಾವತಿ’ ಸಿನೆಮದ ಪ್ರದರ್ಶನಕ್ಕೆ ಅವಕಾಶ ನೀಡಲಾಗದು ಎಂದು ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ರಾಜಸ್ತಾನ, ಗುಜರಾತ್ ಮತ್ತು ಮದ್ಯಪ್ರದೇಶದ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತು ಹಿಮಾಚಲಪ್ರದೇಶದ ಮುಖ್ಯಮಂತ್ರಿಗಳೂ ಸಿನೆಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಉನ್ನತ ಅಧಿಕಾರದಲ್ಲಿರುವವರು ಸಿನೆಮಾದ ಕುರಿತು ಹೇಳಿಕೆ ನೀಡಬಹುದೇ ಎಂದು ಪ್ರಶ್ನಿಸಿ ವಕೀಲ ಎಂ.ಎಲ್.ಶರ್ಮ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ. ಈ ವಿಷಯ ಅತ್ಯಂತ ಪ್ರಮುಖವಾಗಿದೆ. ನಾವು ಸಿನೆಮಾವನ್ನು ವೀಕ್ಷಿಸಿಲ್ಲ. ಅದನ್ನು ಸೆನ್ಸಾರ್ ಮಂಡಳಿಯೆದುರು ಪ್ರಸ್ತುತಪಡಿಸಬೇಕಿದೆ. ಸೆನ್ಸಾರ್ ಮಂಡಳಿ ಅದನ್ನು ವಸ್ತುನಿಷ್ಟವಾಗಿ ಪರಿಶೀಲಿಸಲಿದೆ . ಅದಕ್ಕೂ ಮೊದಲು ಟೀಕೆ, ಹೇಳಿಕೆ ನೀಡುವ ಅಗತ್ಯವೇನಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.







