ಶಿವಮೊಗ್ಗ: ಎಸ್ಪಿ ಕಚೇರಿಯಲ್ಲಿ ಭಾರೀ ಮೌಲ್ಯದ ಆನೆದಂತಗಳ ಕಳವು!
ಶಿವಮೊಗ್ಗ, ನ. 29: ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ಎಸ್ಪಿ ಕೊಠಡಿಯಲ್ಲಿರಿಸಲಾಗಿದ್ದ ಭಾರೀ ಮೌಲ್ಯದ ಎರಡು ಆನೆ ದಂತಗಳು ನಿಗೂಢವಾಗಿ ಕಳುವಾಗಿರುವ ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದ್ದು, ಇದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ತಲಾ ಮೂರು ಅಡಿ ಉದ್ದವಿದ್ದ, ಮಾರುಕಟ್ಟೆಯಲ್ಲಿ ಸರಿಸುಮಾರು 50 ಲಕ್ಷ ರೂ. ಬೆಲೆ ಬಾಳುವ ಈ ಜೋಡಿ ದಂತಗಳು ಯಾವಾಗ ಕಳುವಾಗಿವೆ ಎಂಬುವುದು ಗೊತ್ತಾಗಿಲ್ಲ. ಕಳೆದ ಐದಾರು ವರ್ಷಗಳ ಹಿಂದೆಯೇ ಇವು ಕಣ್ಮರೆಯಾಗಿವೆ. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಇದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸ್ ಇಲಾಖೆಯು ಗುಪ್ತವಾಗಿ ಮಾಹಿತಿ ಕಲೆ ಹಾಕುವ ಕಾರ್ಯ ಕೂಡ ನಡೆಸಿದೆ. ಆದರೆ ದಂತಗಳ ಕಿಂಚಿತ್ತೂ ಮಾಹಿತಿಯೂ ಲಭ್ಯವಾಗಿಲ್ಲವೆಂದು ತಿಳಿದು ಬಂದಿದೆ.
ನಿಗೂಢ: ಎಸ್ಪಿ ಕುಳಿತುಕೊಳ್ಳುವ ಕೊಠಡಿಯಲ್ಲಿ ಈ ಜೋಡಿ ದಂತಗಳನ್ನಿರಿಸಲಾಗಿತ್ತು. ಎಸ್ಪಿ ಕುಳಿತುಕೊಳ್ಳುವ ಚೇರ್ ಹಿಂಭಾಗದಲ್ಲಿಯೇ ಇವುಗಳನ್ನು ಅಳವಡಿಸಲಾಗಿತ್ತು. ಇವು ಎಲ್ಲರ ಆಕರ್ಷಣೆಯ ಕೇಂದ್ರ ಬಿಂಧುವಾಗಿದ್ದವು. ಇತ್ತೀಚೆಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ತಮ್ಮ ಕೊಠಡಿಯನ್ನು ಮೀಟಿಂಗ್ ಹಾಲ್‍ಗೆ ಸ್ಥಳಾಂತರಿಸಿದ್ದರು. ಅದರಂತೆ ಮೀಟಿಂಗ್ ಹಾಲ್ ನವೀಕರಣಗೊಳಿಸಲಾಗಿತ್ತು.
ಈ ವೇಳೆ ಹಳೆ ಕೊಠಡಿಯಲ್ಲಿದ್ದಂತೆ ತಮ್ಮ ಕುರ್ಚಿಯ ಹಿಂಭಾಗದಲ್ಲಿ ಜೋಡಿ ದಂತ ಅಳವಡಿಸುವಂತೆ ಎಸ್ಪಿಯವರಿಗೆ ಕಚೇರಿಯ ಸಿಬ್ಬಂದಿಯೋರ್ವರು ಸಲಹೆ ನೀಡಿದ್ದಾರೆ. ಈ ವೇಳೆ ಜೋಡಿ ದಂತ ನಿಗೂಢವಾಗಿ ಕಳುವಾಗಿರುವ ವಿಷಯ ಎಸ್ಪಿಯವರ ಗಮನಕ್ಕೆ ಬಂದಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಎಸ್ಪಿ ಕೊಠಡಿಯಿಂದಲೇ ಭಾರೀ ಮೌಲ್ಯದ ದಂತಗಳು ಕಣ್ಮರೆಯಾಗಿರುವ ವಿಷಯ ಇದೀಗ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ದಂತಗಳ ಪತ್ತೆ ಕಾರ್ಯಾಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಈ ವಿಶೇಷ ತಂಡವು ಈ ಹಿಂದೆ ಎಸ್ಪಿಗಳ ಬಳಿ ಆರ್ಡಲಿಗಳಾಗಿ ಕೆಲಸ ಮಾಡುತ್ತಿದ್ದವರು ಹಾಗೂ ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವಿಚಾರಣೆಗೊಳಪಡಿಸಿ, ಮಾಹಿತಿ ಕಲೆ ಹಾಕುವ ಕೆಲಸ ನಡೆಸಿದೆ. ಆದರೆ ದಂತಗಳ ಸುಳಿವಿನ ಬಗ್ಗೆ ಈ ತಂಡಕ್ಕೆ ಲಭ್ಯವಾಗಿಲ್ಲವೆಂದು ಮೂಲಗಳು ಮಾಹಿತಿ ನೀಡಿವೆ.
ಸ್ಥಳಾಂತರಿಸಲಾಗಿತ್ತು: ರಮಣ ಗುಪ್ತಾರವರು ಎಸ್ಪಿಯಾಗಿದ್ದ ಅವಧಿಯಲ್ಲಿ ತಮ್ಮ ಕೊಠಡಿಯಲ್ಲಿ ಬೆಲೆ ಬಾಳುವ ದಂತಗಳನ್ನು ಈ ರೀತಿ ಬಹಿರಂಗವಾಗಿಡುವುದು ಸರಿಯಲ್ಲವೆಂದು ಹೇಳಿ, ಅವುಗಳನ್ನು ಗುಪ್ತ ಶಾಖೆಯಲ್ಲಿಡುವಂತೆ ಸೂಚಿಸಿದ್ದರು. ಅದರಂತೆ ಅಂದಿನ ಎಸ್ಪಿ ಆರ್ಡಲಿಯು ದಂತಗಳನ್ನು ಪ್ಯಾಕ್ ಮಾಡಿ ಗುಪ್ತ ಶಾಖೆಗೆ ಹಸ್ತಾಂತರಿಸಿದ್ದರು ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಜಿಲ್ಲಾ ಪೊಲೀಸ್ ಅಧೀಕ್ಷರ ಕಚೇರಿಯಲ್ಲಿ ಅದರಲ್ಲಿಯೂ ಎಸ್ಪಿ ಕೊಠಡಿಯಲ್ಲಿದ್ದ ಬೆಲೆ ಬಾಳುವ ಆನೆ ದಂತಗಳು ಕಳುವಾಗಿರುವ ವಿಷಯವೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೀಡು ಮಾಡಿದೆ. ಪೊಲೀಸರ ತನಿಖೆಯ ನಂತರವಷ್ಟೆ ಇನ್ನಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.







