ಬಿ.ಸಿ.ರೋಡ್ : ಡಿ. 5ರಂದು ಜೆಡಿಎಸ್ ಕಾರ್ಯಕರ್ತರ ಸಭೆ
.jpg)
ಬಂಟ್ವಾಳ, ನ. 29:ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯನ್ನು ಡಿ. 5ರಂದು ಸಂಜೆ 4ಗಂಟೆಗೆ ಬಿ.ಸಿ.ರೋಡ್‍ನ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್‍ನ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಗೆ ಪಕ್ಷ ಜಿಲ್ಲಾ ಹಾಗೂ ರಾಜ್ಯನಾಯಕರು ಭಾಗವಹಿಸಿ, ಪಕ್ಷ ಸಂಘಟನೆಯ ಕುರಿತಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇರುವುದನ್ನು ಒಪ್ಪಿಕೊಂಡ ಸುದ್ದಿಗೋಷ್ಠಿಯಲ್ಲಿದ್ದ ನಾಯಕರು, ಮುಂದಿನ ದಿನಗಳಲ್ಲಿ ಕ್ಷೇತ್ರಾದ್ಯಂತ ಪಕ್ಷಬಿಟ್ಟ ಕಾರ್ಯಕರ್ತರನ್ನು ಹಾಗೂ ಕೆಲನಾಯಕರನ್ನು ಮನವೊಲಿಸಿ ಮರಳಿ ಪಕ್ಷಕ್ಕೆ ಕರೆತರಲು ಪ್ರಯತ್ನಿಸಲಾಗುವುದು ಎಂದ ಅವರು, ಯುವ ಜನಾಂಗವನ್ನು ಕೂಡಾ ಪಕ್ಷಕ್ಕೆ ಸೇರಿಸಲು ಯೋಚಿಸಲಾಗಿದೆ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಎರಡು ಗುಂಪಿನ ನಡುವೆ ಗಲಭೆಯನ್ನು ಸೃಷ್ಟಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕೀಯ ಲಾಭವನ್ನು ಪಡೆಯುತ್ತಿದೆ. ಇಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟರೂ ಉಸ್ತುವಾರಿ ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ. ಒಳಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ನೇತ್ರಾವತಿ ನದಿ ಸೇರುತ್ತಿದೆ ಎಂದು ಆರೋಪಿಸಿದರು.
ಮೀನು ಊಟ ಹಾಗೂ ಚಾ ಮಾರುವ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆಯೇ ವಿನಾಃ ಅಭಿವೃದ್ಧಿಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯವನ್ನೇ ಇದೀಗ ಕಾಂಗ್ರೆಸ್ ಬಿಂಬಿಸುತ್ತದೆ ಎಂದರು.
2018ರ ವಿಧಾನ ಸಭಾ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಜೆಡಿಎಸ್ ಅಧಿಕಾರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ 2 ಸ್ಥಾನವನ್ನು ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜನವರಿ ತಿಂಗಳ ಮೊದಲ ವಾರದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ರಾಷ್ಟ್ರ ಮತ್ತು ರಾಜ್ಯ ನಾಯಕರು ಭಾಗವಹಿಸುವರು ಎಂದರು.
'ಕುಮಾರಪರ್ವ': ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ 'ಕುಮಾರಪರ್ವ' ಯಾತ್ರೆ ಜಿಲ್ಲೆಯ ಸುಬ್ರಹ್ಮಣ್ಯದಿಂದ ಶೀಘ್ರದಲ್ಲಿ ಆರಂಭವಾಗಲಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕ್ಷೇತ್ರ ಜೆಡಿಎಸ್ ಸಮಿತಿಯ ಅಧ್ಯಕ್ಷ ಬಿ. ಮೋಹನ್, ಪ್ರಮುಖರಾದ ಮುಹಮ್ಮದ್ ಶಫೀ, ಪಿ.ಎ. ರಹೀಂ, ಲಕ್ಷ್ಮಿನಾರಾಯಣ ಅಡ್ಯಂತಾಯ, ಅಬೂಬಕ್ಕರ್ ಅಮ್ಮುಂಜೆ, ಪ್ರಕಾಶ್ ಗೋಮ್ಸ್, ಹಾರೂನ್ ರಶೀದ್, ಇಸ್ಮಾಯಿಲ್ ಮತ್ತಿತರರು ಇದ್ದರು.







