ವಾಹನಗಳ ಮೇಲಿನ ಸಂಘಟನೆಗಳ ನಾಮಫಲಕ ತೆರವು
ಬೆಂಗಳೂರು, ನ.29: ವಿವಿಧ ಸಂಘಟನೆಗಳ ಹೆಸರಿನ ನಾಮಫಲಕಗಳನ್ನು ವಾಹನಗಳ ಸಂಖ್ಯಾ ಫಲಕಗಳ ಮೇಲೆ ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು ಸುಮಾರು 1ಲಕ್ಷ 26 ಸಾವಿರಕ್ಕೂ ಹೆಚ್ಚು ವಾಹನಗಳ ನಾಮಫಲಕಗಳ ತೆರವುಗೊಳಿಸಿದ್ದಾರೆ.
ನಗರದ ಪಶ್ಚಿಮದಲ್ಲಿ 70 ಸಾವಿರ, ಪೂರ್ವದಲ್ಲಿ 50 ಸಾವಿರ ಹಾಗೂ ಉತ್ತರದಲ್ಲಿ 6 ಸಾವಿರ ವಾಹನಗಳ ಮೇಲಿನ ಸಂಘಟನೆಗಳ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಜಯಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ, ಸ್ವಾಭಿಮಾನಿ ಕನ್ನಡಿಗರ ವೇದಿಕೆ, ಕನ್ನಡ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ವಿವಿಧ ಸಂಘಟನೆಗಳ ಹೆಸರಿನಲ್ಲಿದ್ದ ನಾಮಫಲಕ ತೆರವುಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಯಾವುದೇ ಅನುಮತಿ ಇಲ್ಲದೆ ಇಂತಹ ನಾಮಫಲಕ ಹಾಕುವಂತಿಲ್ಲ ಎನ್ನುವ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಂಡ ವಸೂಲು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸುಮಾರು 88.64 ಲಕ್ಷ ಪ್ರಕರಣಗಳನ್ನು ದಾಖಲಿಸಿರುವ ನಗರ ಸಂಚಾರ ಪೊಲೀಸರು 92.78 ಕೋಟಿ ರೂ.ಗಳ ದಾಖಲೆ ಪ್ರಮಾಣದ ದಂಡ ವಸೂಲು ಮಾಡಿದ್ದಾರೆ.
ಕೇವಲ 10 ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ 88.64 ಲಕ್ಷ ಸಾವಿರ ಪ್ರಕರಣಗಳನ್ನು ದಾಖಲಿಸಿ 92 ಕೋಟಿ 78 ಲಕ್ಷ ರೂ.ಗಳ ದಂಡ ವಸೂಲು ಮಾಡಲಾಗಿದೆ.
ಪ್ರಸಕ್ತ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದ್ದು, ಪೊಲೀಸರು ಇದೇ ಮಾದರಿಯಲ್ಲಿ ಕಾರ್ಯನಿರ್ವಹಣೆ ಮುಂದುವರಿಸಿದರೆ 100 ಕೋಟಿ ದಂಡ ವಸೂಲು ಮಾಡುವ ಸಾಧ್ಯತೆ ಇದೆ. 2016ರ ಸಾಲಿನಲ್ಲೂ 64.96 ಕೋಟಿ ರೂ. ಮೊತ್ತದ ದಂಡ ವಸೂಲು ಮಾಡಲಾಗಿತ್ತು.







