ವಿಧವೆಗೆ ನ್ಯಾಯಕೊಡಿಸುವಂತೆ ಆಗ್ರಹ : ಕೊಳ್ತಿಗೆ ಗ್ರಾಪಂ ಸದಸ್ಯರ ಪ್ರತಿಭಟನೆ

ಪುತ್ತೂರು,ನ.29: ಅನುಕಂಪದ ಆಧಾರದಲ್ಲಿ ವಿಧವೆಯೋರ್ವರಿಗೆ ಗ್ರಾಮ ಪಂಚಾಯತ್‍ನಲ್ಲಿ ಖಾಯಂ ಜವಾನ ಹುದ್ದೆ ನೀಡಬೇಕೆಂದು ಆಗ್ರಹಿಸಿ ಇಬ್ಬರು ಸದಸ್ಯರು ಪ್ರತಿಭಟನೆ ನಡೆಸಿದ್ದು ಕೊನೆಗೆ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಿದ ಬಳಿಕವೇ ಪ್ರತಿಭಟನೆಯನ್ನು ಹಿಂದೆಗೆದುಕೊಂಡ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಗಿರಿಜಾ ಪಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಪವನ್ ಡಿ.ಜಿ ದೊಡ್ಡಮನೆ ಹಾಗೂ ಭರತ್ ಕುಮಾರ್ ಕೆ.ಎಂ ಅವರು ಪಂಚಾಯತಿಯಲ್ಲಿ ಡಾಟಾ ಎಂಟ್ರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಲಾಕ್ಷ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಸುಚಿತ್ರಾ ಪಿ.ಜೆ. ಅವರಿಗೆ ಖಾಯಂ ಜವಾನ ಹುದ್ದೆ ನೀಡಬೇಕೆಂದು ಹಲವು ಬಾರಿ ಆಗ್ರಹ ಮಾಡಿದ್ದರೂ ಈ ತನಕ ಅನುಷ್ಠಾನಗೊಳಿಸಿಲ್ಲ. ಸುಚಿತ್ರಾ ಅವರಿಗೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಕೊಳಬೇಕು ಇಲ್ಲದಿದ್ದಲ್ಲಿ ನಿರ್ಣಯ ತೆಗೆದುಕೊಳ್ಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ನಾವು ಎಲ್ಲ ದಾಖಲೆಗಳನ್ನು ಹಿಡಿದು ಮಾತನಾಡುತ್ತಿದ್ದು ವೈಯಕ್ತಿಕ ಹಿತಾಸಕ್ತಿಗೆ ಬೇಕಾಗಿ ಪ್ರತಿಭಟಿಸುತ್ತಿಲ್ಲ, ವಿಧವೆಗೆ ನ್ಯಾಯ ಕೊಡಬೇಕೆಂಬುವುದೇ ನಮ್ಮ ಉದ್ದೇಶವಾಗಿದೆ, ಒಂದು ವೇಳೆ ನಮ್ಮ ಬೇಡಿಕೆಗೆ ಸಭೆ ಮನ್ನಣೆ ನೀಡದೇ ಇದ್ದಲ್ಲಿ ನಾವಿಬ್ಬರೂ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪವನ್ ಹಾಗೂ ಭರತ್ ಕುಮಾರ್ ಎಚ್ಚರಿಸಿದರು. ಬಳಿಕ ಪ್ರತಿಭಟನೆಗೆ ಸದಸ್ಯೆ ಯಶೋಧ ಅವರು ಸಾಥ್ ನೀಡಿದರು.
ಸುಮಾರು 1 ಗಂಟೆ 15 ನಿಮಿಷ ಪ್ರತಿಭಟನೆ ನಡೆಸಿದರು. ಈ ನಡುವೆ ಸಾಕಷ್ಟು ಚರ್ಚೆ, ವಾಗ್ವಾದ, ಆರೋಪ, ಪ್ರತ್ಯಾರೋಪ ನಡೆದು ಅಲ್ಲೋಲ ಕಲ್ಲೋಲವಾಗಿದ್ದ ಸಭೆಯಲ್ಲಿ ಪ್ರತಿಭಟಿಸುತ್ತಿದ್ದ ಸದಸ್ಯರಾದ ಪವನ್ ಡಿ.ಜಿ ಹಾಗೂ ಭರತ್ ಕುಮಾರ್ ಕೊನೆಗೂ ತಮ್ಮ ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾದರು. ನಿರ್ಣಯ ಅಂಗೀಕಾರಗೊಂಡ ಬಳಿಕವೇ ಸದಸ್ಯರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕುಮಾರಿ ಮಲ್ಲಿಕಾ, ಸದಸ್ಯರಾದ ವಾರಿಜ, ಷಣ್ಮುಖಲಿಂಗಂ, ದೇವಾನಂದ ರೈ, ಹರೀಶ್ ನಾಯ್ಕ, ವೀಣಾ, ಪ್ರೇಮಾವತಿ, ಲಲಿತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಕ್ಷ್ಮೀ ವರದಿ ವಾಚಿಸಿದರು. ಪಿಡಿಒ ಸುನಿಲ್ ಎಚ್.ಟಿ ಸ್ವಾಗತಿಸಿ ವಂದಿಸಿದರು. ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಕ್ಷತಾರವರು ತಮ್ಮ ಇಲಾಖಾ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರಾದ ರೇವತಿ, ಶ್ರೀಮತಿ, ಬೇಬಿ, ವರಲಕ್ಷ್ಮೀ, ಲಲಿತಾ ಪಿ.ಎಂ ಉಪಸ್ಥಿತರಿದ್ದರು.







