ನಾವು ಸಾಕ್ಷಿ ನಾಶಕ್ಕೆ ಪ್ರಯತ್ನ ನಡೆಸಿಲ್ಲ : ಸುದ್ದಿಗೋಷ್ಠಿಯಲ್ಲಿ ಪತ್ರತರ್ಕರ ಸ್ಪಷ್ಟನೆ
ಪುತ್ತೂರು,ನ.29: ಕಳೆದ ಕೆಲವು ದಿನಗಳ ಕಾಲ ಪತ್ರಿಕಾ ಭವನದ ಮುಂಬಾಗದಲ್ಲಿ ಸುಳ್ಳು ಕೇಸು ವಿರುದ್ದ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದ್ದೇವೆ ಆದರೆ ಯಾವುದೇ ಸಾಕ್ಷಿ ನಾಶಕ್ಕೆ ಅಥವಾ ಜೀವಬೆದರಿಕೆ ಒಡ್ಡುವ ಪ್ರಯತ್ನ ನಡೆಸಿಲ್ಲ. ಆದಾಗ್ಯೂ ನಮ್ಮ ಮೇಲೆ ಮತ್ತೊಂದು ಸುಳ್ಳು ದೂರು ದಾಖಲಿಸಲಾಗಿದೆ. ಈ ಬಗ್ಗೆ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಸತ್ಯ ಪ್ರಮಾಣಕ್ಕೆ ಸಿದ್ದರಿದ್ದೇವೆ ಎಂದು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ಲೋಕೇಶ್ ಬನ್ನೂರು, ಶೇಖ್ ಜೈನುದ್ದೀನ್ ಮತ್ತು ನಾರಾಯಣ ನಾಯ್ಕ್ ಅಮ್ಮುಂಜ ಸ್ಪಷ್ಟನೆ ನೀಡಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುದ್ದಿಯ ವರದಿಗಾರರಾದ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪತ್ರಿಕೆಯ ವಿರುದ್ಧ, ಸಂಸ್ಥೆಯ ಸಿಬ್ಬಂದಿಗಳ ವಿರುದ್ಧ ಅವಹೇಳನ ಮಾಡಲಾಗಿತ್ತು. ಹಾಗೆ ಅವಹೇಳನ ಮಾಡಿದ ವ್ಯಕ್ತಿಗಳು ಪತ್ರಿಕಾಗೋಷ್ಠಿಯನ್ನು ನಡೆಸಲು ಬಂದ ಸಂದರ್ಭದಲ್ಲಿ ಈ ಬಗ್ಗೆ ಸೌಹಾರ್ಧಯುತವಾಗಿಯೇ ವಿಚಾರಿಸಲು ಬಂದಿದ್ದೆವು. ಇದಕ್ಕಾಗಿ ಸುದ್ದಿ ಬಿಡುಗಡೆಯ ಏಳು ಸಿಬ್ಬಂದಿಗಳ ವಿರುದ್ಧ ಮೊದಲು ಕೇಸು ದಾಖಲಾಗಿದ್ದರೆ, ಎರಡನೇ ಹಂತದಲ್ಲಿ ಪತ್ರಿಕೆಯ ಮಹಿಳಾ ಸಿಬ್ಬಂದಿಗಳ ಸಹಿತ 26 ಸಿಬ್ಬಂದಿಗಳ ವಿರುದ್ಧ ಮತ್ತೊಂದು ಕೇಸು ದಾಖಲಾಗಿತ್ತು.
ಪತ್ರಕರ್ತರ ಸಂಘದ ಮೂವರು ಸದಸ್ಯರು ಈ ಕೇಸಿನಲ್ಲಿ ನಮ್ಮ ವಿರುದ್ಧ ಸಾಕ್ಷಿ ಹೇಳಿದ್ದರು. ಇದು ನಮಗೆ ತುಂಬಾನೇ ಬೇಸರವಾಯಿತು. ಈ ಬಗ್ಗೆ ನಾನಾ ಹಂತದ ಮಾತುಕತೆ ನಡೆಯುತ್ತಿರುವಾಗ ಮತ್ತೊಮ್ಮೆ ನಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ವೆಬ್‍ಸೈಟ್‍ಗಳಲ್ಲಿ ಅವಹೇಳನಕಾರಿ ಸಂದೇಶ ಬಿತ್ತರಿಸಲಾಯಿತು. ನಮ್ಮನ್ನು ರೌಡಿಗಳು ಎಂದು ಬಿಂಬಿಸಲಾಯಿತು. ಈ ವಿಷಯದಲ್ಲಿ ಸತ್ಯ ಸಂಗತಿಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾವು ಜನತಾ ನ್ಯಾಯಾಲಯ ಎಂಬ ಹೆಸರಿನಲ್ಲಿ ಸರಣಿ ಸತ್ಯಾಗ್ರಹ ನಡೆಸಿದ್ದೆವು. ಇದರ ಹಿಂದೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ಸಾಕ್ಷಿದಾರರಿಗೆ ಬೆದರಿಕೆ ಹಾಕುವ, ಸಾಕ್ಷಿ ನಾಶ ಮಾಡುವ ಕೆಲಸವನ್ನು ನಾವು ಮಾಡಿಲ್ಲ.
ಜನತಾ ನ್ಯಾಯಾಲಯ ನಡೆಸುವ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಸಾರ್ವಜನಿಕರಿಗೆ ನಮ್ಮ ಅನಿಸಿಕೆಗಳನ್ನು ವಿವರಿಸಿ, ಕರಪತ್ರಗಳನ್ನು ಹಂಚಿದ್ದೇವೆ. ಇದು ನಮ್ಮ ಸತ್ಯ ನಿವೇದನೆಯ ಭಾಗವೇ ಹೊರತು ಬೇರಾವುದೇ ಕೆಟ್ಟ ಉದ್ದೇಶವಲ್ಲ ಎಂದು ಹೇಳಿದ ಅವರು, ಈ ಮೂಲಕ ನಾವು ನಾವು ಸಾಕ್ಷಿ ನಾಶ ಮಾಡಿದ್ದೇವೆ, ಸಾಕ್ಷಿದಾರರಿಗೆ ಜೀವಬೆದರಿಕೆ ಒಡ್ಡಿದ್ದೇವೆ ಎಂದು ಆರೋಪ ಮಾಡುವುದಾದರೆ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದರು.
ನಾವು ನಂಬುವ ಕ್ಷೇತ್ರ ಅಥವಾ ಅವರು ಕರೆದ ಕ್ಷೇತ್ರಕ್ಕಾದರೂ ಹೋಗಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ನಾವು ನ್ಯಾಯಾಲಯದಲ್ಲಿಯೇ ಎದುರಿಸುತ್ತೇವೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಹಿಂದೆ ಪಡೆಯಬೇಕೆಂದು ನಾವು ಕೇಳುವುದಿಲ್ಲ. ಆದರೆ ಸತ್ಯ ಸಂಗತಿ ಅರುಹಲು ಜನತಾ ನ್ಯಾಯಾಲಯಕ್ಕೆ ಹೋಗಿದ್ದೇವೆ. ಅದೇ ರೀತಿ ದೇವರ ನ್ಯಾಯಾಲಯಕ್ಕೆ ಹೋಗಲು ಕೂಡ ಸಿದ್ಧ ಎಂದರು.
ಪತ್ರಿಕೆಯಲ್ಲಿ ಯಾವುದೇ ವರದಿ ಮಾಡುವುದು ಸಂಪಾದಕ ಆಗಿರುವ ತನ್ನ ತೀರ್ಮಾನವಾಗಿದೆ. ಇದರಲ್ಲಿ ಪತ್ರಕರ್ತರ ಅಥವಾ ಸಿಬ್ಬಂದಿಗಳ ಯಾವುದೇ ಪಾತ್ರವಿಲ್ಲ. ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ ಎಂದು ನನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ವಿರುದ್ದ ಸುಳ್ಳು ದೂರು ನೀಡಿರುವುದು ಅವರಿಗೆ ಮಾಡಿರುವ ಅನ್ಯಾಯವಾಗಿದೆ.
ನನ್ನ ಮೇಲಿನ ಸಿಟ್ಟಿನಿಂದ ನನ್ನ ಸಿಬ್ಬಂದಿಗಳ ಮೇಲೆ ಕೇಸು ಹಾಕಲಾಗಿದೆ ಎಂಬ ಮಾಹಿತಿ ಬಂದಿದೆ. ಇದು ಬೇಸರದ ವಿಚಾರ. ನಾನು ಈ ವಿಚಾರದಲ್ಲಿ ತಾನು ಬಹಿರಂಗ ಮಾತುಕತೆಗೆ ಸಿದ್ಧ ಎಂದು ಸುದ್ದಿ ಬಿಡುಗಡೆಯ ಸಂಪಾದಕ ಡಾ. ಯು.ಪಿ. ಶಿವಾನಂದ ಅವರು ತಿಳಿಸಿದರು.
ಧರಣಿ ಸತ್ಯಾಗ್ರಹದ ವೇಳೆಯಲ್ಲಿ ಎಲ್ಲಿಯೂ ನ್ಯಾಯಾಂಗ ನಿಂದನೆ ಮಾಡಿಲ್ಲ. ಸಾಕ್ಷಿ ನಾಶಕ್ಕೆ ಯತ್ನಿಸಿಲ್ಲ. ಪತ್ರಕರ್ತರ ಸಂಘದ ಸದಸ್ಯರೇ ನಮ್ಮ ವಿರುದ್ದ ಸಾಕ್ಷಿ ಹಾಕಿದ್ದು ಈ ವಿಚಾರದಲ್ಲಿ ಪತ್ರಕರ್ತರ ಸಂಘದಿಂದ ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಇದರಿಂದಾಗಿ ಇಂತಹ ಸಂಘದದಲ್ಲಿ ನಾವು ಇರಬೇಕೇ ಎನ್ನುವುದು ಪ್ರಶ್ನೆಯಾಗಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ನಾವು ಒಂದು ವಾರದ ಒಳಗಾಗಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.







