ಡಿ.12ರಂದು ಮಂಗಳೂರಿನಲ್ಲಿ 'ಸಾಮರಸ್ಯ ನಡಿಗೆ': ರಮಾನಾಥ ರೈ

ಬೆಂಗಳೂರು, ನ.29: ಮಂಗಳೂರಿನ ಪರಂಗಿಪೇಟೆಯಿಂದ ಮಾಣಿವರೆಗೆ ಡಿ.12ರಂದು 'ಸಾಮರಸ್ಯ ನಡಿಗೆ'ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಿಷೇಧಾಜ್ಞೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಸಾಮರಸ್ಯ ನಡಿಗೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ ಎಂದರು.
ಹತ್ಯೆ ಮಾಡಿರುವ ಪಕ್ಷಗಳು ಹಾಗೂ ಸಂಘಟನೆಗಳು ಹೊರತುಪಡಿಸಿ ಬೇರೆ ಎಲ್ಲರೂ ಈ ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಪ್ರಯತ್ನಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯು ಮತೀಯ ಶಕ್ತಿಗಳ ಕೇಂದ್ರವಾಗುತ್ತಿದೆ ಅನ್ನೋ ನೋವು ನನಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳೊಂದಿಗೆ ರಮಾನಾಥ ರೈ ಸಂವಾದ: ಇದಕ್ಕೂ ಮುನ್ನ ಮಕ್ಕಳ ಹಕ್ಕುಗಳ ಆಯೋಗ ಮತ್ತು ಯುನಿಸೆಫ್ ಸಹಯೋಗದಲ್ಲಿ ರಾಜ್ಯದ 13 ಜಿಲ್ಲೆಗಳ ಕಾಡಂಚಿನ ಗ್ರಾಮಗಳ ಮಕ್ಕಳ ಜತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಅಪ್ರಾಮಾಣಿಕ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಕಾಯ್ದೆಗಳನ್ನು ಕಂಡರೆ ಆಗುವುದಿಲ್ಲ. ಇದೇ ಕಾರಣಕ್ಕೆ ಅರಣ್ಯ ಹಕ್ಕು ಕಾಯ್ದೆ ಕೆಲವರಿಗೆ ಕಂಟಕವಾಗಿದೆ ಎಂದರು.
ಪಾರಂಪರಿಕವಾಗಿ ಕಾಡಿನ ಅಂಚಿನಲ್ಲಿ ವಾಸವಿರುವ ಗಿರಿಜನರು, ಸಿದ್ದಿ, ಕಾಡುಕುರುಬ ಹಾಗೂ ಜೇನುಕುರುಬರಿಗೆ ಭೂಮಿಯ ಹಕ್ಕು ಪತ್ರ ನೀಡಲು ನಮ್ಮ ಸರಕಾರ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹಾಗೂ ಆಯಾ ಜಿಲ್ಲಾಧಿಕಾರಿಗಳಿಗೆ ಹೆಚ್ಚು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೊಡಗಿನಲ್ಲಿ ಶಾಲೆಗೆ ಓಡಾಡಲು ಮೂಲಭೂತ ಸೌಕರ್ಯಗಳ ಸಮಸ್ಯೆ ಕಾಡುತ್ತಿದೆ. ಸರಕಾರ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿದರೂ ಸಮಸ್ಯೆಗಳು ಯಾಕೆ ಪರಿಹಾರವಾಗುತ್ತಿಲ್ಲ ಎಂದು ಜೇನುಕುರುಬ ಸಮುದಾಯದ ವಿದ್ಯಾರ್ಥಿನಿಯೊಬ್ಬರು ಸಚಿವರಿಗೆ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ಅದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ವಿಚಾರವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







