ಕೇಂದ್ರ ಸರಕಾರದಿಂದ ಕಾನೂನು ದುರುಪಯೋಗ: ‘ಎಸ್. ದುರ್ಗಾ’ ನಿರ್ದೇಶಕ ಸನಲ್

ಪಣಜಿ, ನ.29: ಅಧಿಕಾರದಲ್ಲಿರುವ ಜನರು ತಮ್ಮ ಕಾರ್ಯ ಸಾಧಿಸಲು ಯಾವುದೇ ಮಟ್ಟಕ್ಕೆ ಇಳಿಯಲೂ ಸಿದ್ದರಿದ್ದಾರೆ . ಕೇಂದ್ರ ಸರಕಾರ ತನ್ನ ಉದ್ದೇಶ ಸಾಧನೆಗೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲೂ ಸಿದ್ಧವಿದೆ ಎಂದು ಮಲಯಾಳಂ ಸಿನೆಮಾ ‘ಎಸ್. ದುರ್ಗಾ’ದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಹೇಳಿದ್ದಾರೆ.
‘ಎಸ್. ದುರ್ಗಾ’ ಸಿನೆಮವನ್ನು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಸಿನೆಮಕ್ಕೆ ನೀಡಿರುವ ಪ್ರಮಾಣಪತ್ರದ ಮರುಪರಿಷ್ಕರಣೆ ಅಗತ್ಯವಿದೆ ಎಂದು ಸೆನ್ಸಾರ್ ಮಂಡಳಿ ತಿಳಿಸಿದ್ದ ಕಾರಣ ಚಿತ್ರೋತ್ಸವದಲ್ಲಿ ಸಿನೆಮಾ ಪ್ರದರ್ಶನಗೊಳ್ಳಲಿಲ್ಲ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸನಲ್ ಕುಮಾರ್, ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ನ್ಯಾಯಾಂಗವನ್ನು ಯಾವ ರೀತಿ ಧಿಕ್ಕರಿಸುತ್ತಾರೆ ಎಂಬುದನ್ನು ತಿಳಿದು ಖುಷಿಯಾಗಿದೆ ಎಂದು ಹೇಳಿದರು. ನನಗೆ ಒಂದಿಷ್ಟೂ ಬೇಸರವಾಗಿಲ್ಲ. ಸಂಘ ಪರಿವಾರ ಅಧಿಕಾರಕ್ಕೆ ಬಂದರೆ ಸಮಸ್ಯೆಯೇನು ಎಂದು ಕೆಲವರು ಪ್ರಶ್ನಿಸುತ್ತಿದ್ದರು. ಇದೀಗ ಇವರ ಪ್ರಶ್ನೆಗೆ ಉತ್ತರ ದೊರೆತಿರುವುದರಿಂದ ನನಗೆ ಸಂತಸವಾಗಿದೆ. ಒಂದು ವಿಷಯವಂತೂ ಸ್ಪಷ್ಟವಾಗಿದೆ. ಈಗ ಅಧಿಕಾರದಲ್ಲಿರುವವರು ತಮಗೆ ಇಷ್ಟವಾಗದಿರುವುದನ್ನು ನಾಶಗೊಳಿಸುತ್ತಾರೆ. ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಅಥವಾ ನ್ಯಾಯಾಂಗವನ್ನು ಧಿಕ್ಕರಿಸಿ ತಮ್ಮ ಕಾರ್ಯ ಸಾಧಿಸುತ್ತಾರೆ . ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಿನೆಮಾದ ವಿರುದ್ಧ ನಡೆಸಿದ ನೀಚ ಆಟದಿಂದ ತನಗೆ ಬೇಸರವಾಗಿದೆ ಎಂದು ಸನಲ್ ತಿಳಿಸಿದರು.







