ಅಪಹರಣಕ್ಕೊಳಗಾಗಿದ್ದ ಸಫ್ವಾನ್ ಮೃತದೇಹದ ಅವಶೇಷ ಪತ್ತೆ

ಮಂಗಳೂರು, ನ.29: ಕಾಟಿಪಳ್ಳ ಸಮೀಪ ತಂಡವೊಂದರಿಂದ ಅಪಹರಿಸಲ್ಪಟ್ಟು ಕೊಲೆಗೀಡಾಗಿರುವ ಸಫ್ವಾನ್‌ನ ಮೃತದೇಹದ ಅವಶೇಷಗಳನ್ನು ಆಗುಂಬೆ ಘಾಟಿ ಪ್ರದೇಶದಲ್ಲಿ ಪತ್ತೆಯಾಗಿದೆ.
ಪಣಂಬೂರು ಎಸಿಪಿ ರಾಜೇಂದ್ರ ಡಿ.ಎಸ್ ನೇತೃತ್ವದಲ್ಲಿ ಪೊಲೀಸ್ ತಂಡವು ಮಂಗಳವಾರ ಆಗುಂಬೆ ಘಾಟಿ ಪ್ರದೇಶಕ್ಕೆ ಭೇಟಿ ನೀಡಿತು. ಆರೋಪಿಗಳು ತೋರಿಸಿರುವ ಸ್ಥಳದಲ್ಲಿ ಪೊಲೀಸರು ಸಫ್ವಾನ್‌ನ ಮೃತದೇಹದ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಘಾಟಿಯ 9ನೆ ತಿರುವಿನಲ್ಲಿ ಎಲುಬುಗಳು ಪತ್ತೆಯಾಗಿದ್ದರೆ, 10ನೆ ತಿರುವಿನಲ್ಲಿ ಸಫ್ವಾನ್ ಧರಿಸಿದ್ದ ಪ್ಯಾಂಟ್ ಮತ್ತು ಟೀ ಶರ್ಟ್‌ನ್ನು ಸಫ್ವಾನ್‌ನ ತಂದೆ ಅಬ್ದುಲ್ ಹಮೀದ್ ಪತ್ತೆ ಹಚ್ಚಿದ್ದಾರೆ.
ಮೃತದೇಹದ ಅವಶೇಷಗಳ ಡಿಎನ್‌ಎನ್ನು ಸಂಗ್ರಹಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಅ.5ರಂದು ಸಫ್ವಾನ್‌ನನ್ನು ಐದು ಮಂದಿಯ ತಂಡವೊಂದು ಕಾಟಿಪಳ್ಳ ಸಮೀಪದಿಂದ ಅಪಹರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ಆರೋಪಿಗಳು ನೀಡಿರುವ ಮಾಹಿತಿಯಂತೆ ಪೊಲೀಸರು ಆಗುಂಬೆ ಘಾಟಿಗೆ ತೆರಳಿ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







