ಸುಜ್ಲಾನ್ ಕಂಪೆನಿ: ಲಾಕೌಟ್ ವಾಪಾಸು
ಸುದೀರ್ಘ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ

ಪಡುಬಿದ್ರಿ,ನ.29: ಬುಧವಾರ ನಡೆದ ಸುದೀರ್ಘ ಆರು ಗಂಟೆಗಳ ಕಾಲ ನಡೆದ ಮಾತುಕತೆಯ ಬಳಿಕ ಇಲ್ಲಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಕಂಪೆನಿಯು ಲಾಕೌಟ್ ಘೋಷಣೆ ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ.
ಬುಧವಾರ ಕಂಪೆನಿ ಅಧಿಕಾರಿಗಳು, ಶಾಸಕ ವಿನಯಕುಮಾರ್ ಸೊರಕೆ, ಇಂಟೆಕ್ ಮುಖಂಡರು, ಕಾರ್ಮಿಕರ ಜತೆ ನಡೆದ ಸುದೀರ್ಘ ಚರ್ಚೆಯಲ್ಲಿ ಈ ತೀರ್ಮಾನವನ್ನು ಕಂಪೆನಿ ಕೈಗೊಂಡಿದೆ.
ಕಂಪೆನಿ ಮತ್ತೆ ಮುಚ್ಚುಗಡೆಯನ್ನು ವಾಪಸ್ ತೆಗೆದುಕೊಳ್ಳಲು ಒಂದು ವಾರಗಳ ಕಾಲ ಬೇಕು. ಕಂಪೆನಿಯ ಮುಖ್ಯಕಚೇರಿಯಲ್ಲಿ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಳಿಕ ಮುಚ್ಚುಗಡೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸಭೆಯಲ್ಲಿ ಸುಜ್ಲಾನ್ ಕಂಪೆನಿಯ ಕಾರ್ಪೊರೇಟ್ ಮುಖ್ಯಸ್ಥ ವಿಜಯ ಅಸ್ನಾನಿ ತಿಳಿಸಿದ್ದಾರೆ.
ಮುಚ್ಚುಗಡೆ ವಾಪಸ್ ತೆಗೆದುಕೊಳ್ಳಲು ಮಂಗಳವಾರ ಕರೆದ ಸಭೆ ವಿಫಲವಾದ ಹಿನ್ನಲೆಯಲ್ಲಿ ಬುಧವಾರ ಮತ್ತೆ ಸಭೆ ಕರೆದಿತ್ತು. ಆದರೆ ಬುಧವಾರ ಮೊದಲ ಮತ್ತು ಎರಡನೇ ಸುತ್ತಿನ ಸಭೆ ಸ್ಪಷ್ಟ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಯಿತು. ಮೊದಲ ಮತ್ತು ಎರಡನೇ ಸಭೆಯಲ್ಲಿ ಕಂಪೆನಿಯ ಕೆಲವೊಂದು ಕಠಿಣ ಕ್ರಮದ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ಮುಖಂಡರು ಈ ನಿರ್ಣಯ ಕೈಗೊಳ್ಳಲು ಒಪ್ಪಿಗೆ ಸೂಚಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಮಧ್ಯಾಹ್ನದ ಬಳಿಕ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಸೌಹಾರ್ದಯುತವಾಗಿ ಪರಿಹಾರ ಕಂಡಿತು.
ಕಂಪೆನಿಯು ಕಾರ್ಮಿಕರ ಮೇಲೆ ಹೂಡಿದ ಕೇಸುಗಳನ್ನು ಹಿಂದಕ್ಕೆ ಪಡೆಯಲು ಒಪ್ಪಿಗೆ ಸೂಚಿಸಿತು. ಅಲ್ಲದೆ 19 ಮಂದಿ ಕಾರ್ಮಿಕರ ತನಿಖೆ ನಡೆಸುವುದನ್ನು ಕೈಬಿಟ್ಟಿತು. ಕಂಪೆನಿ ಎಲ್ಲಾ ಕಾರ್ಮಿಕರನ್ನು ಮತ್ತೆ ಸೇರಿಸಿಕೊಳ್ಳುವುದು, ದಿನಕ್ಕೆ 30 ಬ್ಲೇಡ್‍ಗಳನ್ನು ತಯಾರಿಸುವುದು ಹಾಗೂ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನವನ್ನು ನೀಡುವುದು ಮುಂತಾದ ತೀರ್ಮಾನವನ್ನು ಕಂಪೆನಿ ಕೈಗೊಂಡಿತು. ಕಂಪೆನಿಯ ತೀರ್ಮಾನಕ್ಕೆ ಕಾರ್ಮಿಕ ಮುಖಂಡರು ಒಪ್ಪಿಗೆ ಸೂಚಿಸಿದರು.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ವಿನಯಕುಮಾರ್ ಸೊರಕೆ, ಕಾರ್ಮಿಕರ ಮತ್ತು ಸುಜ್ಲಾನ್ ಅಧಿಕಾರಿಗಳು ಹಾಗೂ ವಿವಿಧ ಮುಖಂಡರ ನೇತೃತ್ವದಲ್ಲಿ ನಡೆದ ಸಭೆ ಸೌಹಾರ್ದಯುತವಾಗಿ ಪರಿಹಾರ ಕಂಡಿದೆ. ಕಂಪೆನಿಯ ಎಲ್ಲಾ ನಿಲುವಿಗೂ ಕಾರ್ಮಿಕರು ಬದ್ಧರಾಗಿದ್ದು, ಕಾರ್ಮಿಕರ ಬೇಡಿಕೆಗಳನ್ನು ಕಂಪೆನಿ ಈಡೇರಿಸುವ ಭರವಸೆ ನೀಡಿದೆ. ಇನ್ನು ಒಂದು ವಾರಗಳ ಬಳಿಕ ಕಂಪೆನಿ ಮುಖ್ಯಸ್ಥರ ಸಭೆಯಲ್ಲಿ ನಿರ್ಣಯಕೈಗೊಂಡು ಮತ್ತೆ ಕಂಪೆನಿ ಆರಂಭಗೊಳ್ಳಲಿದೆ ಎಂದರು.
ಇಂಟೆಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್ ಮಾತನಾಡಿ, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದ ಕಾರ್ಮಿಕರಿಗೆ ಸಂತಸವಾಗಿದೆ. ಕಾರ್ಮಿಕರ ಹಾಗೂ ಕಂಪೆನಿ ಅಧಿಕಾರಿಗಳ ಸಭೆಯು ಸೌಹಾರ್ದಯುತವಾಗಿ ಮುಗಿದಿದೆ. ಇದು ಕಾರ್ಮಿಕರ ಜಯವಾಗಿದೆ ಎಂದಿದ್ದಾರೆ.
ಪಡುಬಿದ್ರೆ ಬಳಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಕಂಪೆನಿ ನಷ್ಟದ ನೆಪವೊಡ್ಡಿ ನವೆಂಬರ್ 14 ರಿಂದ ಏಕಾಏಕಿ ಲಾಕೌಟ್ ಘೋಷಣೆ ಮಾಡಿತ್ತು. ಇದನ್ನು ಖಂಡಿಸಿ ಕಂಪೆನಿ ಕಾರ್ಮಿಕರು ಮೂರು ದಿನ ಪ್ರತಿಭಟನೆಯನ್ನೂ ನಡೆಸಿದ್ದರು. ಬಳಿಕ ನವೆಂಬರ್ 16 ರಂದು ಜಿಲ್ಲಾಡಳಿತ ಹಾಗೂ ಸುಜ್ಲಾನ್ ಕಂಪೆನಿಯ ಕಾರ್ಪೊರೇಟ್ ಮುಖ್ಯಸ್ಥ ವಿಜಯ ಅಸ್ನಾನಿ ಸಮ್ಮುಖದಲ್ಲಿ ಕಾರ್ಮಿಕ ಮುಖಂಡರ ಸಭೆ ನಡೆದು, ನ.20 ರಂದು ನಿರ್ಧಾರ ಪ್ರಕಟಿಸುವುದಾಗಿ ಕಂಪೆನಿ ತಿಳಿಸಿತ್ತು. ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಆದರೆ ಕಂಪೆನಿ ನೀಡಿದ ಗಡುವು ಮುಗಿದು, 8 ದಿನಗಳ ಬಳಿಕ ಅಂದರೆ ಮಂಗಳವಾರದಂದು ಮಧ್ಯಾಹ್ನ 2 ಗಂಟೆಗೆ ಈ ಸಂಬಂಧ ಸಭೆಯನ್ನು ನಿಗಧಿ ಮಾಡಿತ್ತು. ಆದರೆ ಸಭೆ ವಿಫಲವಾಗಿ ಬುಧವಾರಕ್ಕೆ ಮುಂದೂಡಲಾಗಿತ್ತು.
ಸಭೆಯಲ್ಲಿ ಕಂಪೆನಿ ಜಿ.ಎಂ. ಅಂಥೋನಿ ಫಿಲಿಫ್, ಆಸ್ಪನ್ ಅಧಿಕಾರಿ ಅಶೋಕ್ ಶೆಟ್ಟಿ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ದಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ರಾಜ್ಯ ಇಂಟೆಕ್ ಪ್ರಧಾನ ಕಾರ್ಯದರ್ಶಿ ಸುರೇಶ್, ಅಬೂಬಕ್ಕರ್, ಮಿಥುನ್ ರೈ, ಧನುಂಜಯ್ ಕೋಟ್ಯಾನ್ ಉಪಸ್ಥಿತರಿದ್ದರು.







