ಮದ್ದೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಹತ್ಯೆ

ಮದ್ದೂರು, ನ.29: ಯುವಕನೋರ್ವನನ್ನು ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಕೌಡ್ಲೆ ಸಮೀಪದ ಕೆ.ಜಿಕೊಪ್ಪಲು ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಕೊಪ್ಪ ಹೋಬಳಿ ಕೆ.ಮಲ್ಲಿಗೆರೆ ಗ್ರಾಮದ ರಮೇಶ್ ಅವರ ಪುತ್ರ ಸಂತೋಷ್(24) ಹತ್ಯೆಗೊಳಗಾದ ಯುವಕನಾಗಿದ್ದು, ಈತ ಸ್ನೇಹಿತರ ಜತೆ ಗ್ರಾಮದ ಬಳಿ ಮಾತನಾಡುತ್ತಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ಮಾಜಿ ಶಾಸಕ ಕೆ.ಸುರೇಶ್‍ಗೌಡ ಅವರ ಬೆಂಬಲಿಗನಾಗಿದ್ದು, ವಿಷಯ ತಿಳಿದ ಸುರೇಶ್‍ಗೌಡ ಸ್ಥಳಕ್ಕಾಗಮಿಸಿ ಪೊಲೀಸ್ ಅಧಿಕಾರಿಗಳೊಡನೆ ಘಟನೆ ಸಂಬಂಧ ಮಾಹಿತಿ ಕುರಿತಾಗಿ ಚರ್ಚಿಸಿರೆನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ಪಿ ಮಲ್ಲಿಕ್, ಸಿಪಿಐ ಕೆ.ಪ್ರಭಾಕರ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪ ಠಾಣೆ ಪಿಎಸ್ಸೈ ಶಿವನಂಜು ಪ್ರಕರಣ ದಾಖಲಿಸಿಕೊಮಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.







