ಅರೆಬೆಂದ ಅಪರಿಚಿತ ವ್ಯಕ್ತಿಯ ಶವ ಪತ್ತೆ

ನಾಗಮಂಗಲ, ನ.29: ಬೇರೊಂದು ಸ್ಥಳದಲ್ಲಿ ಕೊಲೆಗೈದ ವ್ಯಕ್ತಿಯ ಶವವನ್ನು ತಾಲೂಕಿನ ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊಸೂರು ಗೇಟ್‍ನ ಕಲ್ಲುದೇವನಹಳ್ಳಿ ರಸ್ತೆಬದಿಯ ಹುರುಳಿ ಹೊಲದಲ್ಲಿ ಪೆಟ್ರೋಲ್ ಸುರಿದು ಅರೆಬರೆ ಸುಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಅರೆಬರೆ ಬೆಂದ ವ್ಯಕ್ತಿಯ ಶವದ ವಿಳಾಸ ಮತ್ತು ಹೆಸರು ಪತ್ತೆಯಾಗಿಲ್ಲ. ಗ್ರಾಮದ ರೈತರು ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದಾಗ ಮೈಮೇಲೆ ಬಟ್ಟೆ ಇಲ್ಲದ ಅರೆಬರೆ ಬೆಂದ ಸುಟ್ಟ ಶವ ಕಣ್ಣಿಗೆ ಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿಯಂತೆ ಮಂಗಳವಾರ ತಡರಾತ್ರಿ 12ರವರೆಗೂ ಅಂತಹ ಘಟನೆ ನಡೆದಿಲ್ಲ. ಆದರೆ, ಕಾರೊಂದರಲ್ಲಿ ದುಷ್ಕರ್ಮಿಗಳು ಯಾವುದೋ ವಿಳಾಸ ಕೇಳಿಕೊಂಡು ಸುತ್ತಾಡಿರುವ ಮಾಹಿತಿಗಳು ಕೇಳಿಬಂದಿವೆ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗಿನ ಜಾವ 3 ನಂತರದ ಸಮಯದಲ್ಲಿ ಬೇರೊಂದು ಕಡೆ ಕೊಲೆಗೈದ ವ್ಯಕ್ತಿಯ ಶವವನ್ನು ಇಲ್ಲಿ ತಂದು ಪೆಟ್ರೋಲ್ ಸುರಿದು ಸುಡಲು ಪ್ರಯತ್ನಿಸಿದ್ದು, ನಂತರದಲ್ಲಿ ಪರಾರಿಯಾಗಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಎಎಸ್‍ಪಿ ಲಾವಣ್ಯ, ನಾಗಮಂಗಲ ಡಿವೈಎಸ್‍ಪಿ ಧರ್ಮೇಂದರ್, ಸಿಪಿಐ ಧನರಾಜ್, ಪಿಎಸ್ಸೈ ಚಿದಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು.
ಶವವನ್ನು ಹೆಚ್ಚುವರಿ ಪರೀಕ್ಷೆಗಾಗಿ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







