ಮುಖ್ಯ ಕಾರ್ಯದರ್ಶಿಗೆ ರತ್ನಪ್ರಭಾಗೆ ಗಣ್ಯರಿಂದ ಅಭಿನಂದನೆ
ಬೆಂಗಳೂರು, ನ. 29: ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದ ಮಹಿಳಾ ಮುಖಂಡರ ನಿಯೋಗ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಅಭಿನಂದಿಸಿದ್ದಾರೆ.
ಬುಧವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ರತ್ನಪ್ರಭಾ ಅವರ ಕಚೇರಿಯಲ್ಲಿ ಹಲವು ಗಣ್ಯರು ಪುಷ್ಪಗುಚ್ಛವನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ, ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ ಹಾಗೂ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಡಾ. ವಿಜಯ ಕುಮಾರ್ ಹೂಗುಚ್ಛ ನೀಡಿ ಅಭಿನಂದಿಸಿದರು.
ಮಹಿಳಾ ಶಕ್ತಿಗೆ ಗೌರವ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್‌ಮಹಾ ನಿರ್ದೇಶಕರ ಹುದ್ದೆಗೆ ಮಹಿಳೆಯರನ್ನು ನೇಮಕ ಮಾಡುವ ಮೂಲಕ ಮಹಿಳಾ ಶಕ್ತಿಗೆ ಗೌರವ ತಂದುಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದರು.





