ಕಾಶ್ಮೀರದಲ್ಲಿ ಕಲ್ಲುತೂರಾಟ ಪ್ರಕರಣ:4,327 ಮಂದಿಯ ವಿರುದ್ಧದ ಪ್ರಕರಣ ಹಿಂಪಡೆಯಲು ಸಿಎಂ ಆದೇಶ

ಶ್ರೀನಗರ, ನ.29: ಜಮ್ಮುಕಾಶ್ಮೀರದಲ್ಲಿ 4,327 ಯುವಜತೆಯ ವಿರುದ್ಧ ದಾಖಲಾಗಿರುವ ಕಲ್ಲು ತೂರಾಟ ಪ್ರಕರಣವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆದೇಶಿಸಿದ್ದಾರೆ.
ಡಿಜಿಪಿ ಎಸ್.ಪಿ.ವೈದ್ಯ ನೇತೃತ್ವದ ಉನ್ನತಾಧಿಕಾರದ ಸಮಿತಿಯೊಂದರ ವರದಿಯಲ್ಲಿ ಮಾಡಿರುವ ಶಿಫಾರಸ್ಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
2008ರಿಂದ 2014ರವರೆಗೆ ರಾಜ್ಯದಲ್ಲಿ ದಾಖಲಾಗಿರುವ ಕಲ್ಲೆಸೆತ ಪ್ರಕರಣಗಳನ್ನು ಮರು ವಿಮರ್ಶಿಸಲಾಗುವುದು ಎಂದು ಅಧಿಕಾರ ಸ್ವೀಕರಿಸಿದ ತಕ್ಷಣ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಘೋಷಿಸಿದ್ದರು. ಅದರಂತೆ 104 ಪ್ರಕರಣಗಳಲ್ಲಿ 634 ಯುವಜನತೆಯ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಾಸು ಪಡೆಯಲು ಅಧಿಕಾರ ಸ್ವೀಕರಿಸಿದ ಎರಡು ತಿಂಗಳೊಳಗೆ ಆದೇಶಿಸಿದ್ದರು.
ಆದರೆ ಆ ಬಳಿಕ ರಾಜ್ಯದಲ್ಲಿ ಹಿಂಸಾಚಾರ ಪ್ರಕರಣ ನಿರಂತರವಾಗಿ ಹೆಚ್ಚಿದ ಕಾರಣ ಈ ಪ್ರಕ್ರಿಯೆಗೆ ಅಡ್ಡಿಯುಂಟಾಗಿತ್ತು. ಇದೀಗ ಈ ಪ್ರಕ್ರಿಯೆಯನ್ನು ಮರಳಿ ಆರಂಭಿಸಿರುವ ದ್ಯೋತಕವಾಗಿ ಮುಖ್ಯಮಂತ್ರಿ 744 ಪ್ರಕರಣಗಳಲ್ಲಿ 4,327 ಮಂದಿಯ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಲು ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲೆಸೆತದ ಪ್ರಕರಣ ಹಿಂಪಡೆಯಬೇಕು ಎಂದು ವಿವಿಧೆಡೆಗಳಿಂದ ಆಗ್ರಹ ಕೇಳಿ ಬಂದಿತ್ತು. ಪ್ರಕರಣ ಹಿಂಪಡೆದಿರುವುದು ರಾಜ್ಯದಲ್ಲಿ ಸಕಾರಾತ್ಮಕ ಹಾಗೂ ಮೈತ್ರಿಪೂರ್ಣ ಪರಿಸ್ಥಿತಿ ನೆಲೆಸಲು ಹಾಗೂ ಯುವಜನತೆ ರಚನಾತ್ಮಕ ಕಾರ್ಯದಲ್ಲಿ ತೊಡಗಲು ಸ್ಫೂರ್ತಿ ನೀಡಲಿದೆ ಎಂದು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.







