ಶಾಂತಿ, ಸುವ್ಯವಸ್ಥೆ ಪಾಲನೆಗೆ ಜಿಲ್ಲಾಧಿಕಾರಿ ಸೂಚನೆ
ಶೋಭಾಯಾತ್ರೆ ಹಾಗೂ ಮೀಲಾದುನ್ನೆಬಿ ಪ್ರಯುಕ್ತ
ಚಿಕ್ಕಮಗಳೂರು, ನ.29: ಜಿಲ್ಲೆಯಲ್ಲಿ ಡಿ.2ರಂದು ಬಾಬಾಬುಡಾನ್‌ಗಿರಿಯಲ್ಲಿ ಶೋಭಾಯಾತ್ರೆ ಮತ್ತು ಮೀಲಾದುನ್ನೆಬಿ ಪ್ರಯುಕ್ತ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಹಾಗೂ ಶಿಸ್ತು ಪಾಲನಾ ದೃಷ್ಟಿಯಿಂದ ಜಿಲ್ಲಾಧಿಕಾರಿ ಎಂ.ಕೆ ಶ್ರೀರಂಗಯ್ಯ ಅಧಿಸೂಚನೆ ಹೊರಡಿಸಿದ್ದಾರೆ.
ಡಿ.2 ರಂದು ಮುಸ್ಲಿಮರು ಮೀಲಾದುನ್ನಬಿ ಪ್ರಯುಕ್ತ ನಗರದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು, ಮೆರವಣಿಗೆಯು ಬೆಳಗ್ಗೆ 8 ಗಂಟೆಗೆ ನಗರದ ಅಂಡೆಛತ್ರದಿಂದ ಹೊರಟು ಎಂ.ಜಿ ರಸ್ತೆ, ಆಝಾದ್ ಪಾರ್ಕ್ , ಮಾರ್ಕೆಟ್ ರಸ್ತೆ, ಕೆ.ಎಂ ರಸ್ತೆ ಕಡೆಯಿಂದ ಹನುಮಂತಪ್ಪ ವೃತ್ತಕ್ಕೆ ಬಂದು ಪುನಃ ಎಂ.ಜಿ ರಸ್ತೆ ಮುಖಾಂತರ ಅಂಡೆಛತ್ರ ತಲುಪಲಿದೆ.
ಸ್ಪೋಟಕ/ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆಯನ್ನು ಖಾಸಗಿ ಅಥವಾ ಸಾರ್ವಜನಿಕ ಆಸ್ತಿಪಾಸ್ತಿ ಗಳನ್ನು ಹಾನಿಗೊಳಿಸುವು ದು, ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿ ಧರ್ಮ, ಕೋಮು, ಜಾತಿ ಪಂಥ, ಸರಕಾರ ಸಂಸ್ಥೆ, ಸಂಘಟನೆಗಳು, ಸ್ಥಳಗಳು ಹಾಗೂ ಕಾರ್ಯನಿರತ ಸಿಬ್ಬಂದಿ ವಿರುದ್ಧ ಅಥವಾ ನಿಂದಿಸುವ ಯಾವುದೇ ಭಾಷಣ, ಅವಾಚ್ಯ ಶಬ್ದಗಳ ಬಳಕೆ ಪ್ರಚೋದನಾಕಾರಿ ಹಾಡು, ಧ್ವಜ ಇತ್ಯಾದಿ ರೂಪಗಳಲ್ಲಿ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದೆ.
ಜಿಲ್ಲೆಯಲ್ಲಿ ಡಿ.2ರಂದು ಬಾಬಾಬುಡಾನ್‌ಗಿರಿಯಲ್ಲಿ ಶೋಭಾಯಾತ್ರೆ ಮತ್ತು ಮೀಲಾದುನ್ನಬಿ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಹನುಮಂತಪ್ಪ ವೃತ್ತ, ಎಂ.ಜಿ ರಸ್ತೆ ಪ್ರಾರಂಭದಿಂದ ಆಝಾದ್ ಪಾರ್ಕ್‌ವರೆಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ, ಮಾರ್ಕೆಟ್ ರಸ್ತೆ ಮತ್ತು ಕೆ.ಎಂ. ರಸ್ತೆಯ ಶೃಂಗಾರ್ ಸರ್ಕಲ್‌ನಿಂದ ಟೆಂಡರ್ ಚಿಕನ್‌ವರೆಗೆ ಬೆಳಗ್ಗೆ 7ರಿಂದ 12:30 ರವರೆಗೆ ಹಾಗೂ ಬಸವನಹಳ್ಳಿ ಮುಖ್ಯ ರಸ್ತೆ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ಎಲ್ಲ ರೀತಿಯ ವಾಹನಗಳ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







