ಸರಣಿ ಅಪರಾಧ ಕೃತ್ಯ: ಜನರಲ್ಲಿ ಭಯದ ವಾತಾವರಣ
ಸುಂಟಿಕೊಪ್ಪ, ನ.29: ಸಮೀಪದ ಮಾದಾಪುರ ಇಗ್ಗೋಡ್ಲುವಿನಲ್ಲಿ ಕೆಲ ತಿಂಗಳ ಹಿಂದೆ ವೃದ್ಧೆಯ ಹತ್ಯೆ ಹಾಗೂ ಇತ್ತೀಚೆಗೆ ಹಾಡಹಗಲೇ ಮಹಿಳೆಯ ಕತ್ತಿನಿಂದ ಚಿನ್ನಾಭರಣ ಅಪಹರಿಸಿದ ಆರೋಪಿಗಳು ಇನ್ನೂ ಪತ್ತೆಯಾಗದಿರುವ ಬಗ್ಗೆ ಜನವಲಯದಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗಿದೆ.
ಮಾದಾಪುರದಲ್ಲಿ ಅನ್ಯೋನ್ಯತೆಯಿಂದ ಎಲ್ಲಾ ಸಮುದಾಯದವರು ಜೀವನ ಸಾಗಿಸುತ್ತಿದ್ದಾರೆ. ಕಳೆದ 2ವರ್ಷ ಹಿಂದೆ ಪುತ್ತೂರಿನಲ್ಲಿ ದರೋಡೆ ಮಾಡಿದ ವ್ಯಕ್ತಿಗಳು ಮಾದಾಪುರದ ತಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಬೀಡುಬಿಟ್ಟಿದ್ದು ಆನಂತರ ಪೊಲೀಸರ ವಶವಾಗಿದ್ದರು.
ಇಗ್ಗೋಡ್ಲುವಿನಲ್ಲಿ 3 ತಿಂಗಳ ಹಿಂದೆ ಕಾಫಿ ಬೆಳೆಗಾರ ಮಹಿಳೆಯೊಬ್ಬರು ಮನೆಯಲ್ಲಿ ಏಕಾಂಗಿ ತೋಟ ನಿರ್ವಹಣೆ ಮಾಡಿಕೊಂಡು ಜೀವಿಸುತ್ತಿದ್ದು, ಅವರನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಹಣ,ಚಿನ್ನಾಭರಣ ದೋಚಲು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಇಗ್ಗೋಡ್ಲುವಿನಲ್ಲಿ ಇತ್ತೀಚೆಗೆ ದೇವಪಂಡ ಚಿನ್ನವ್ವ ಎಂಬವರು ಮಧ್ಯಾಹ್ನದ ವೇಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಆಗಂತುಕರು ಅವರ ಕತ್ತಿನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು. ಈ ಆರೋಪಿಗಳನ್ನು ಪೊಲೀಸರ ಬಲೆಗೆ ಬಿದ್ದಿಲ್ಲದೆ ಇರುವ ಬಗ್ಗೆ ಮಾದಾಪುರ ವ್ಯಾಪ್ತಿಯ ಜನತೆ ಭಯಭೀತಿ ವ್ಯಕ್ತಪಡಿಸುತ್ತಿದ್ದಾರೆ.







