ಚಿಕ್ಕಮಗಳೂರು: ಮಾತೃಪೂರ್ಣ ಯೋಜನೆಗೆ ಆರ್ಥಿಕ ನೆರವು ಒದಗಿಸಲು ಜಿಲ್ಲಾಧಿಕಾರಿಗೆ ಮನವಿ
ಚಿಕ್ಕಮಗಳೂರು, ನ.29: ಸರಕಾರ ರಾಜ್ಯಾದ್ಯಂತ ನೂತನವಾಗಿ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಗೆ ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ನೆರವನ್ನು ನೀಡಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಅಡುಗೆ ತಯಾರಿಸಲು ದೊಡ್ಡ ಗಾತ್ರದ ಗ್ಯಾಸ್ ಒಲೆ, ಕುಕ್ಕರ್ ನೀಡಬೇಕು, ಅಡುಗೆ ಪದಾರ್ಥ ಒದಗಿಸುವುದು, 4 ಸಿಲೆಂಡರ್ ಬದಲಿಗೆ ಹೆಚ್ಚುವರಿಯಾಗಿ 8 ಸಿಲೆಂಡರ್ ನೀಡಬೇಕು. ಫಲಾನುಭವಿ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ನೀಡುವ ಕೋಳಿ ಮೊಟ್ಟೆ ಖರೀದಿ ಹಾಗೂ ತರಕಾರಿ ಖರೀದಿಗೆ ಕಾರ್ಯಕರ್ತೆಯರ ಖಾತೆಗೆ ಮುಂಗಡವಾಗಿ ಹಣ ಜಮಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಫಲಾನುಭವಿಗಳ ಹಾಜರಾತಿಯ ಬಗ್ಗೆ ಎಸ್ಸೆಮ್ಮೆಸ್ ಕಳುಹಿಸುವಂತೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ಬಾಲವಿಕಾಸ ಸಮಿತಿ ಹೆಸರಿನಲ್ಲಿ ಜಂಟಿ ಖಾತೆ ತೆರೆಯುವುದರಿಂದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತೆಯರ ನಡುವೆ ಸಮನ್ವಯತೆಯ ಕೊರತೆಯಿದ್ದು, ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಿನಿ ಅಂಗನವಾಡಿಗಳಿಗೆ ತುರ್ತಾಗಿ ಸಹಾಯಕಿಯರನ್ನು ನೇಮಿಸುವುದು, ಹಾಲಿ ಯೋಜನೆ ಸಂಬಂಧ ಕಾರ್ಯಕರ್ತೆಯರಿಗೆ 500 ರೂ. ಸಹಾಯಕಿಯರಿಗೆ 250 ರೂ.ವೇತನ ಹೆಚ್ಚಳ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಕ್ರಮಬದ್ಧವಾಗಿ ಬಾಡಿಗೆ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಚಿಕ್ಕಮಗಳೂರು ತಾಲೂಕು ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಜಯಾ ಶೇಖರ್, ಮಂಗಳಾ, ಮಂಜುಳಾ, ಪಾರ್ವತಿ, ಬಿಲ್ಕಿಸ್‌ಬಾನು, ವಿಜಯಕುಮಾರಿ, ಸಂಧ್ಯಾ ಮತ್ತಿತರರಿದ್ದರು.







