ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಜಯರಾಜ್ ಆಗ್ರಹ
ಮಡಿಕೇರಿ, ನ.29: ರಾಜ್ಯದ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಕರ್ನಾಟಕ ರಾಜ್ಯ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಎ.ಸಿ.ಜಯರಾಜ್ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕ್ರೈಸ್ತರ ನಡಿಗೆ ವಿಧಾನಸೌಧದೆಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ಕ್ರೈಸ್ತರಿಗೋಸ್ಕರ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯನ್ನು ಸರಕಾರ ಸ್ಥಾಪಿಸಿ, ಅದಕ್ಕೆ 175 ಕೊಟಿ ರೂ.ಕಾಯ್ದಿರಿಸಿದೆ. ಆದರೆ, ಇದರ ಮೂಲಕ ಕೇವಲ ಚರ್ಚ್ ದುರಸ್ತಿ, ಸಮುದಾಯ ಭವನ, ಕಾಂಪೌಂಡ್ ವಾಲ್ ನಿರ್ಮಾಣಕ್ಕಷ್ಟೇ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರದ್ದು ಪಡಿಸಿ ನಿಗಮವನ್ನು ಸ್ಥಾಪಿಸಬೇಕು. ಕ್ರೈಸ್ತರ ಜನಸಂಖ್ಯೆಗೆ ಅನುಗುಣವಾಗಿ ನಿಗಮದಲ್ಲಿನ 850 ಕೋಟಿ ರೂ.ವನ್ನು ನೂತನವಾಗಿ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ ವರ್ಗಾಯಿಸಬೇಕು. ಸರಕಾರ ತ್ರಿಸದಸ್ಯ ಆಯೋಗವನ್ನು ರಚಿಸಿ ಕ್ರೈಸ್ತರ ಸ್ಥಿತಿಗತಿಗಳ ಅಧ್ಯಯನ ನಡೆಸುವ ಮೂಲಕ ಕ್ರೈಸ್ತರಿಗೆ ಮೀಸಲಾತಿಯ ಒಬಿಸಿ ಅಥವಾ ಅಲ್ಪಸಂಖ್ಯಾತರೆನ್ನುವ ನೆಲೆಯಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಯ್ ಐ.ಡಿ., ಗೌರವ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಉಪಾಧ್ಯಕ್ಷ ವಿ.ಎಸ್. ಸಜಿ, ರಾಜ್ಯ ಸಮಿತಿ ಸದಸ್ಯ ಕೆ.ಥೋಮಸ್, ಮಡಿಕೆೇರಿ ತಾಲೂಕು ಅಧ್ಯಕ್ಷ ಕೆ.ಜೆ. ಪೀಟರ್ ಉಪಸ್ಥಿತರಿದ್ದರು.







