ಘನತ್ಯಾಜ್ಯ ನಿರ್ವಹಣೆ: ಕೇರಳದ ಆಲಪುಝಗೆ ವಿಶ್ವಮಟ್ಟದ ಮಾನ್ಯತೆ

ತಿರುವನಂತಪುರಂ, ನ.29: ಘನತ್ಯಾಜ್ಯ ನಿರ್ವಹಣೆಯಲ್ಲಿ ಯಶಸ್ವಿಯಾದ ವಿಶ್ವದ ಐದು ನಗರಗಳ ಪ್ರತಿಷ್ಟಿತ ಪಟ್ಟಿಯಲ್ಲಿ ಕೇರಳದ ಆಲೆಪ್ಪಿ(ಆಲಪುಝ) ಸ್ಥಾನ ಪಡೆದಿರುವುದಾಗಿ ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಜಪಾನ್‌ನ ಒಸಾಕ, ಸ್ಲೊವೇನಿಯಾದ ಲಿಬ್ಲಿಜಾನ, ಮಲೇಶ್ಯಾದ ಪೆನಾಂಗ್ ಮತ್ತು ಕೊಲಂಬಿಯಾದ ಕಜಿಕಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ನಾಲ್ಕು ನಗರಗಳಾಗಿವೆ. ಆಲೆಪ್ಪಿ ನಗರಪಾಲಿಕೆಯನ್ನು ಪ್ರಗತಿಶೀಲ ಎಂದು ಬಣ್ಣಿಸಿರುವ ವಿಶ್ವಸಂಸ್ಥೆಯ ವರದಿಯಲ್ಲಿ, ಕೆಲ ವರ್ಷಗಳ ಹಿಂದೆ ನಗರದ ಚರಂಡಿಗಳಲ್ಲಿ ಕಸಕಡ್ಡಿ, ತ್ಯಾಜ್ಯಗಳು ತುಂಬಿಕೊಂಡಿತ್ತು ಮತ್ತು ಪ್ರವಾಸಿಗಳ ಆಕರ್ಷಣೆಯ ಪ್ರಮುಖ ನಗರವಾದ ಆಲೆಪ್ಪಿಗೆ ಭೇಟಿ ನೀಡುವ ಪ್ರವಾಸಿಗಳಿಗೆ ಭಾರೀ ಸಮಸ್ಯೆ ಉಂಟಾಗುತ್ತಿತ್ತು. ನೊಣಗಳು ಹಾಗೂ ಸೊಳ್ಳೆಗಳ ಸಮಸ್ಯೆಯಿಂದ ಸ್ಥಳೀಯರೂ ಹೈರಾಣಾಗಿದ್ದರು. ಇದರಿಂದ ರೋಸಿಹೋದ ಸ್ಥಳೀಯರು ಪ್ರತಿಭಟನೆ ನಡೆಸಿ ನಗರದ ಪ್ರಮುಖ ತ್ಯಾಜ್ಯಶೇಖರಣಾ ಕೇಂದ್ರವನ್ನು ಮುಚ್ಚಿಸಲು ಯಶಸ್ವಿಯಾಗಿದ್ದರು ಎಂದು ತಿಳಿಸಲಾಗಿದೆ.
ಆ ನಂತರ ನಗರಾಡಳಿತವು ಸೂಕ್ತ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅನುಸರಿಸುವ ಮೂಲಕ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದೆ. ಕೊಳೆಯಬಲ್ಲ ತ್ಯಾಜ್ಯವನ್ನು ಆರಂಭಿಕ ಹಂತದಲ್ಲೇ ಪ್ರತ್ಯೇಕಿಸಿ, ಅದರಿಂದ ಬಯೋಗ್ಯಾಸ್ ತಯಾರಿಸಿ ಸುಮಾರು 1.74 ಲಕ್ಷ ಮಂದಿಗೆ ಗ್ಯಾಸ್ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಭಾರತದ ಪರಿಸರ ಮತ್ತು ವಿಜ್ಞಾನ ಕೇಂದ್ರವು ಆಲೆಪ್ಪಿಯನ್ನು ದೇಶದ ಅತ್ಯಂತ ಸ್ವಚ್ಛ ನಗರ ಎಂದು ಹೆಸರಿಸಿತ್ತು.







