ಮಹಿಳೆಯರಿಗೆ ಸಮಾಜದಲ್ಲಿ ಬಹು ಮಹತ್ವದ ಜವಾಬ್ದಾರಿಯಿದೆ: ರಾಘವೇಂದ್ರ
ಸಂಪರ್ಕಜಾಲ ಕಾರ್ಯಾಗಾರ

ಶಿಕಾರಿಪುರ, ನ.29: ಮಹಿಳೆಯರು ಪುರುಷರಿಗೆ ಸಮಾನವಾಗಿ ಸರ್ವ ಕ್ಷೇತ್ರದಲ್ಲಿಯೂ ಉನ್ನತ ಸಾಧನೆಯಿಂದ ಗುರುತಿಸಿಕೊಂಡಿದ್ದು, ಪೂರಕವಾಗಿ ಸ್ಥಳೀಯ ಆಡಳಿತದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಾಗಿದೆ ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಬುಧವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ದಿ.ಹಂಗರ್ ಪ್ರಾಜೆಕ್ಟ್ ಬೆಂಗಳೂರು, ವಿಕಸನ ಸಂಸ್ಥೆ ತರೀಕೆರೆ, ಸುಗ್ರಾಮ ಗ್ರಾ.ಪಂ ಚುನಾಯಿತ ಮಹಿಳಾ ಸದಸ್ಯರ ಸಂಘ ಶಿಕಾರಿಪುರ ವತಿಯಿಂದ ನಡೆದ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಸಂಪರ್ಕಜಾಲ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರಿಗೆ ಬಹು ಮಹತ್ವದ ಜವಾಬ್ದಾರಿಯಿದ್ದು, ಸದೃಢ ನಾಡು ಕಟ್ಟುವ ದಿಸೆಯಲ್ಲಿ ಕೈಜೋಡಿಸಬೇಕಾಗಿದೆ ಎಂದ ಅವರು, ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇದೀಗ ಪುರುಷ ಸಮಾನವಾಗಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆಯ ಮೂಲಕ ಗುರುತಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸುಗ್ರಾಮ ಗ್ರಾ.ಪಂ ಮಹಿಳಾ ಚುನಾಯಿತ ಸದಸ್ಯರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ,ಉದ್ಯೋಗ ಖಾತ್ರಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಉದ್ಯೋಗ ಹಣದ ಸಮಸ್ಯೆಯಿದ್ದು, ಸರ್ಕಾರ ಗಮನ ಹರಿಸಿ ಪರಿಹರಿಸಬೇಕಾಗಿದೆ ಎಂದು ಆಗ್ರಹಿಸಿದರು.
ಈ ವೇಳೆ ಕಿಶೋರಿಯರಿಗೆ ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸುವ ಭಿತ್ತಿ ಪತ್ರವನ್ನು ಶಾಸಕ ರಾಘವೇಂದ್ರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಪರಮೇಶ್ವರಪ್ಪ, ಪುರಸಭಾ ಸದಸ್ಯ ಚಾರ್ಗಲ್ಲಿ ಪರಶುರಾಮ, ಹಿತ್ತಲ ಗ್ರಾ.ಪಂ ಅಧ್ಯಕ್ಷೆ ಸರಳಾ,ಹಾರೋಗೊಪ್ಪ ಗ್ರಾ.ಪಂ ಅಧ್ಯಕ್ಷೆ ಆಶಾ, ಬಿಳಿಕಿ ಗ್ರಾ.ಪಂ ಅಧ್ಯಕ್ಷೆ ಅಮೃತಾ ವಿಕಸನ ಸಂಸ್ಥೆಯ ಶ್ರೀನಿವಾಸ್, ಜಯಂತಿ ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.







