ಅಮ್ಯಾಲುಯಲ್ಲಿ ಚಿರತೆ ಕಾಟ
ನಾಯಿ ಕಣ್ಮರೆ-ನಾಗರಿಕರ ಆರೋಪ

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಅಮ್ಯಾಲು ಅರಣ್ಯ ಪ್ರದೇಶದಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಇರಿಸಿದ ಬೋನು.
ಬಂಟ್ವಾಳ, ನ.30: ತಾಲೂಕಿನ ರಾಯಿ ಸಮೀಪದ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳ ಗಡಿ ಭಾಗದಲ್ಲಿರುವ ಅರಣ್ಯ ಪ್ರದೇಶದಿಂದ ಚಿರತೆ ರಾತ್ರಿ ವೇಳೆ ನಾಡಿಗೆ ಬಂದು ಸಾಕು ನಾಯಿ ಎಗರಿಸುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಇಲ್ಲಿನ ಕೊಯಿಲ ಗ್ರಾಮ ಅಮ್ಯಾಲು ನಿವಾಸಿ ಹೆರಾಲ್ಡ್ ಡಿಸೋಜ ಎಂಬವರ ಮನೆ ಜಗುಲಿಯಲ್ಲಿ ಮಲಗಿದ್ದ ನಾಯಿ ಕೊಂಡೊಯ್ಯಲು ಚಿರತೆ ವಿಫಲ ಯತ್ನ ನಡೆಸಿದೆ. ತಕ್ಷಣವೇ ನಾಯಿ ಬೊಗಳಿದ ಶಬ್ದಕ್ಕೆ ಹೆರಾಲ್ಡ್ ಅವರು ಧಾವಿಸಿ ಬಂದು ವಿದ್ಯುತ್ ದೀಪ ಉರಿಸಿದಾಗ ಚಿರತೆ ಪರಾರಿಯಾಗಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇಲ್ಲಿನ ಕೃಷಿಕರಾದ ರಾಬರ್ಟ್ ಡಿಸೋಜ ಮತ್ತು ಥೋಮಸ್ ಎಂಬವರ ಮನೆ ಅಂಗಳದಿಂದ ಈಗಾಗಲೇ ಎರಡು ಸಾಕು ನಾಯಿ ಕಣ್ಮರೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ಅಂಗಡಿಪಲ್ಕೆ ಎಂಬಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಇನ್ನೊಂದೆಡೆ ರಾಯಿ ಸಮೀಪದ ದೈಲ ಮತ್ತು ಬದನಡಿ ಮತ್ತಿತರ ಪ್ರದೇಶಗಳಲ್ಲಿ ಕಳೆದ ವರ್ಷ ಚಿರತೆ ದಾಳಿ ನಡೆಸಿ ಹಲವಾರು ಸಾಕು ನಾಯಿ ಸ್ವಾಹ ಮಾಡಿದೆ. ಇದರಿಂದಾಗಿ ಮನೆ ಸಮೀಪದ ಹಟ್ಟಿಯಲ್ಲಿರುವ ಜಾನುವಾರುಗಳ ಕಣ್ಮರೆ ಸಾಧ್ಯತೆ ಬಗ್ಗೆಯೂ ಭೀತಿ ಆವರಿಸಿದೆ.
ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಸ್ಥಳೀಯ ನಾಗರಿಕರು ದೂರಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ತಂದಿಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.







