ಉಳ್ಳಾಲ: ಒಂದೇ ವಾರ್ಡಿಗೆ 50ಲಕ್ಷ ರೂ. ಅನುದಾನ ಮಂಜೂರು ಆರೋಪ
ಲೋಕಾಯುಕ್ತ, ಎಸಿಬಿಗೆ ದೂರು ನೀಡಲು ಮುಂದಾದ ಪ್ರತಿಪಕ್ಷ ಸದಸ್ಯರು
ಉಳ್ಳಾಲ,ನ.30: ಉಳ್ಳಾಲ ನಗರಸಭೆಯಲ್ಲಿ ಈಗಾಗಲೇ ನಡೆದಿರುವ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು ನಗರಭೆಯ 27ವಾರ್ಡ್‍ಗಳಲ್ಲಿ ಕೇವಲ ಒಂದೇ ವಾರ್ಡಿಗೆ 50ಲಕ್ಷ ರೂ. ಎಸ್‍ಎಫ್‍ಸಿ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿದ್ದು ಆ ಮೂಲಕ ನಗರಸಭೆಯ ಆಡಳಿತ ಕಾನೂನು ದುರ್ಬಳಕೆ ಮಾಡಿರುವುರಿಂದ ತನಿಖೆಗಾಗಿ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಲಾಗುವುದು ಎಂದು ನಗರಸಭೆಯ ಪ್ರತಿಪಕ್ಷ ಸದಸ್ಯ ಇಸ್ಮಾಯಿಲ್ ಪೊಡಿಮೋನು ಆರೋಪಿಸಿದರು.
ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ನಗರಸಬೆ ಅವ್ಯವಸ್ಥೆ, ಅವ್ಯವಹಾರ ಭ್ರಷ್ಟಾಚಾರದಿಂದ ಮುಳುಗಿದೆ. ಅಭಿವೃದ್ಧಿಗೆ ಬೆನ್ನುಹಾಕಿ ಸ್ವಹಿತಾಸಕ್ತಿಗೆ ಇಲ್ಲಿನ ಆಡಳಿತವರ್ಗ ಮಣೆ ಹಾಕುತ್ತಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸೆಯಲಾಗುತ್ತಿದ್ದು ಪ್ರತಿಪಕ್ಷದ ಸದಸ್ಯರ ವಾರ್ಡ್‍ಗಳಲ್ಲಿ ಅಭಿವೃದ್ಧಿಯ ಕೆಲಸಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ವಿಚಾರದಲ್ಲೂ ಕ್ಷೇತ್ರದ ಶಾಸಕರ ನಗರಸಭೆಯ ಹಕ್ಕುಗಳಿಗೆ ಚ್ಯುತಿ ಬರುವಂತೆ ವರ್ತಿಸುತ್ತಿದ್ದಾರೆ ಎಂದು ನುಡಿದರು.
ನಗರಸಭೆಯ 25ನೇ ವಾರ್ಡಿನಲ್ಲಿ ಈಗಾಗಾಲೇ ಮುಂಗಡ ಕಾಮಗಾರಿ ಆಗಿರುವ ಕೆಲಸಕ್ಕೆ ಎಸ್‍ಎಫ್‍ಸಿಯ ವಿಶೇಷ ಆನುದಾನ 50ಲಕ್ಷ ರೂ. ಗಳನ್ನು ಒಂದೇ ವಾರ್ಡಿಗೆ ಕೌನ್ಸಿಲ್ ಸಭೆಯ ನಿಯಮಗಳಿಗೆ ವಿರುದ್ಧವಾಗಿ ನೀಡಲು ನಿರ್ಣಯಿಸಿದ್ದಾರೆ. ಅ. 30ರಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯಕ್ಕೆ ಚರ್ಚೆಯಾಗದೆ ನ. 28ರಂದು ಕೌನ್ಸಿಲ್ ಸಭೆಯಲ್ಲಿ ನೇರವಾಗಿ ಅನುದಾನ ಮಂಜೂರು ಮಾಡಿಸಿರುವುದು ಅವ್ಯವಹಾರಕ್ಕೆ ಸಾಕ್ಷಿಯಾಗಿದೆ ಎಂದರು.
ನಗರಾಭಿವೃದ್ಧಿ ಇಲಾಖೆಯಿಂದ ಅ. 23ರಂದು ಕಳುಹಿಸಿರುವ ಸುತ್ತೋಲೆಯಲ್ಲಿ 50ಲಕ್ಷ ರೂ. ವಿಶೇಷ ಅನುದಾನದಲ್ಲಿ ಕೈಗಳ್ಳುವ ಕಾಮಗಾರಿಗಳ ಕ್ರಿಯಾಯೋಜನೆ ಅಂದಾಜು ಪಟ್ಟಿಗಳಿಗೆ ತಾಂತ್ರಿಕ ಪರಿಶೀಲನೆ ಜೊತೆಗೆ ಜಿಲ್ಲಾ„ಕಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ ಇಲ್ಲಿ ಈಗಾಗಲೇ ಆಗಿರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ನಗರಸಭೆ ಮುಂದಾಗಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಈ ವಿಚಾರದಲ್ಲಿ ನಗರಸಭೆಯ ಇಬ್ಬರು ಕಿರಿಯ ಆಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಕರ್ತವ್ಯಲೋಪ ಭ್ರಷ್ಟಾಚಾರದ ವಿರುದ್ಧ ಜನಾಂಧೋಲನ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಲು ತೀರ್ಮಾನಿಸಲಾಗಿದೆ. ಆ ಮೂಲಕ ನಗರಸಭೆಯಲ್ಲಿ ನಡೆದಿರುವ ಪ್ರತಿಯೊಂದು ಅಕ್ರಮ ಬಯಲಿಗೆಳೆಯುತ್ತೇವೆ ಎಂದು ಸಾರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕಿ ಮಹಾಲಕ್ಷ್ಮಿ, ಕೌನ್ಸಿಲರ್‍ಗಳಾದ ಮೀನಾಕ್ಷಿ ದಾಮೋದರ, ಶಶಿಕಲಾ ಶೆಟ್ಟಿ, ಸೂರ್ಯಕಲಾ ಶೆಟ್ಟಿ, ಸರಿತಾ ಜೀವನ್ ಹಾಗೂ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.







