ಜ.2ರಿಂದ ಮೂಡುಬಿದಿರೆಯಲ್ಲಿ ಸಿಪಿಎಂ ರಾಜ್ಯ ಸಮ್ಮೇಳನ

ಮಂಗಳೂರು, ನ.30: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಅಖಿಲ ಭಾರತ ಅಧಿವೇಶನವು 2018ರ ಎಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ 2018ರ ಜನವರಿ 2,3,4,5ರಂದು ಮೂಡುಬಿದಿರೆಯಲ್ಲಿ ರಾಜ್ಯದ 22ನೆ ಸಮ್ಮೇಳನ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಫಾ. ಜಾನ್ ಫೆರ್ನಾಂಡೀಸ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜ.2ರಂದು ಬೆಳಗ್ಗೆ 10ಕ್ಕೆ ಬಹಿರಂಗ ಸಭೆ ನಡೆಯಲಿದ್ದು, ಪಕ್ಷದ 10 ಸಾವಿರಕ್ಕೂ ಅಧಿಕ ಸದಸ್ಯರು, ಕಾರ್ಯಕರ್ತರು ಮೆರವಣಿಗೆ ನಡೆಸಲಿದ್ದಾರೆ. ಆಲಂಗಾರುವಿನಿಂದ ಸ್ವರಾಜ್ ಮೈದಾನ ತನಕ ನಡೆಯಲಿರುವ ಈ ಮೆರವಣಿಗೆಯಲ್ಲಿ ಕಾ.ಸೀತಾರಾಮ ಯೆಚೂರಿ, ಕೇರಳದ ಮಾಜಿ ಸಚಿವ ಕಾ.ಎಂ.ಎ.ಬೇಬಿ, ಪಕ್ಷದ ರಾಜ್ಯ ಕಾರ್ಯದರ್ಶಿ ಕಾ.ಜಿ.ವಿ.ಶ್ರೀರಾಮರೆಡ್ಡಿ, ಕಾ.ಎಸ್.ವರಲಕ್ಷ್ಮೀ ಭಾಷಣ ಮಾಡಲಿದ್ದಾರೆ ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಕಾ. ಸೀತಾರಾಮ ಯೆಚೂರಿ ಸಮ್ಮೇಳನ ಉದ್ಘಾಟಿಸಲಿದ್ದು, ಪಾಲಿಟ್‌ಬ್ಯೂರೊ ಸದಸ್ಯ ಕಾ.ರಾಮಚಂದ್ರ ಪಿಳ್ಳೆ, ಕಾ, ಎಂ. ಎ. ಬೇಬಿ, ಕಾ.ರಾಘವಲು ಮಾರ್ಗದರ್ಶನ ನೀಡಲಿದ್ದಾರೆ. ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ರಂಗದಲ್ಲಿ ನಾಯಕತ್ವ ವಹಿಸುತ್ತಿರುವ ಪಕ್ಷದ 400 ಮಂದಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದ ಸಭಾಂಗಣಕ್ಕೆ ಪಕ್ಷದ ಕಾರ್ಮಿಕ ರಂಗದ ಮುಂದಾಳಾಗಿದ್ದ ಕಾ.ಪ್ರಸನ್ನ ಕುಮಾರ್‌ರ, ಸಮ್ಮೇಳನ ನಡೆಯಲಿರುವ ನಗರಕ್ಕೆ ಅವಿಭಜಿತ ದ.ಕ.ಜಿಲ್ಲೆಯ ರೈತ ಮುಂದಾಳು ಕಾ.ಅಬ್ರಹಾಂ ಕರ್ಕಡರ, ಬಹಿರಂಗ ಸಭೆಯ ವೇದಿಕೆಗೆ ಕಾ.ಮುಹಮ್ಮದ್ ದಸ್ತಗಿರ್‌ರ, ಬಹಿರಂಗ ಸಭೆ ನಡೆಯುವ ನಗರಕ್ಕೆ ಸಮಾಜವಾದಿ ನಾಯಕ ಚಿಂತಕ ಕ್ಯೂಬಾದ ಫ್ಯುಡೆಲ್ ಕ್ಯಾಸ್ಟ್ರೋರವರ ಹೆಸರನ್ನಿಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಆರ್.ಶ್ರೀಯಾನ್, ಕಾರ್ಯಾಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ, ಕೆ.ಯಾದವ ಶೆಟ್ಟಿ, ಕೋಶಾಧಿಕಾರಿ ಜೆ.ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್ ಉಪಸ್ಥಿತರಿದ್ದರು.







