ಗುಜರಾತ್ ನಲ್ಲಿ ಬಿಜೆಪಿ ಪರಿಸ್ಥಿತಿ ಕೆಟ್ಟದಾಗಿದೆ ಎಂದರೇ ಸಿಎಂ ರೂಪಾನಿ?

ಗುಜರಾತ್, ನ.30: ಗುಜರಾತ್ ನಲ್ಲಿ ಬಿಜೆಪಿಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎನ್ನುವ ಮಾತುಗಳಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿರುವ ಧ್ವನಿ ಗುಜರಾತ್ ಸಿಎಂ ವಿಜಯ್ ರೂಪಾನಿಯವರದ್ದೆಂದು ಹೇಳಲಾಗಿದೆ.
ಸುರೇಂದ್ರ ನಗರ್ ನ ನರೇಶ್ ಸಂಗಿತಂ ಎಂಬವರೊಂದಿಗೆ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ನಲ್ಲಿ ಸುರೇಂದ್ರ ನಗರದ ಜೈನ ಸಮುದಾಯವನ್ನು ಸೆಳೆಯುವುದು ಕಷ್ಟಕರವಾಗಿರುವುದು ಹೇಗೆ ಎನ್ನುವುದರ ಬಗ್ಗೆ ಚರ್ಚಿಸಲಾಗಿದೆ.
ತಾನು ದೇಶದ ಓರ್ವ ಮಾತ್ರ ಜೈನ ಮುಖ್ಯಮಂತ್ರಿಯಾಗಿದ್ದು, ಜೈನ ಸಮುದಾಯದ ಜನಸಂಖ್ಯೆ 5 ಶೇ.ದಷ್ಟು ಮಾತ್ರ ಇದ್ದರೂ ತನ್ನನ್ನು ಸಿಎಂ ಮಾಡಿರುವುದಾಗಿ ಹೇಳಲು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಎಂದು ರೂಪಾನಿಯವರದ್ದು ಎನ್ನಲಾದ ಧ್ವನಿ ಹೇಳುತ್ತದೆ.
ಈ ಇಬ್ಬರ ನಡುವಿನ ಸಂಭಾಷಣೆಯ ಭಾಷಾಂತರ ಇಲ್ಲದೆ.
ನರೇಶ್: ಯೆಸ್ ಸರ್, ಜೈ ಜಿನೇಂದ್ರ
ರೂಪಾನಿಯವರದ್ದು ಎನ್ನಲಾದ ಧ್ವನಿ: ನಮಸ್ಕಾರ, ಜೈ ಜಿನೇಂದ್ರ. ನರೇಶ್ ಭಾಯ್ ನಾವು ನಮ್ಮೊಳಗೆ ಬಡಿದಾಡಿಕೊಳ್ಳಬಾರದು. ನಾವು ನಮ್ಮ ಫಾರ್ಮ ಅನ್ನು ಮರಳಿ ಪಡೆಯಬೇಕು. ದೇಶದಲ್ಲಿರುವುದು ಕೇವಲ ಒಬ್ಬ ಮಾತ್ರ ಜೈನ ಮುಖ್ಯಮಂತ್ರಿ.
ನರೇಶ್: ಖಂಡಿತವಾಗಿಯೂ
ರೂಪಾನಿಯವರದ್ದು ಎನ್ನಲಾದ ಧ್ವನಿ: ನರೇಂದ್ರ ಭಾಯ್ ನನಗೆ ಕರೆ ಮಾಡಿದ್ದರು.ಗುಜರಾತ್ ನಲ್ಲಿ ಕೇವಲ 5 ಶೇ. ಮಾತ್ರ ಜೈನರಿದ್ದರೂ ಅದೇ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಸುರೇಂದ್ರ ನಗರದಲ್ಲಿರುವ ಜೈನರು ನಮ್ಮನ್ನು ಬೆಂಬಲಿಸಲು ಸಿದ್ಧರಿದ್ದಾರೆಯೇ? ಎಂದಿದ್ದರು.
ನರೇಶ್: ಹೌದು
ರೂಪಾನಿಯವರದ್ದು ಎನ್ನಲಾದ ಧ್ವನಿ: ಇಲ್ಲಿ ನಮ್ಮ ಪರಿಸ್ಥಿತಿ ಕೆಟ್ಟದ್ದಾಗಿದೆ. ನನ್ನ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ.
ನರೇಶ್: ನಿಮ್ಮ ಪರಿಸ್ಥಿತಿ ಹಾಳಾಗಲು ನಾವು ಬಿಡುವುದಿಲ್ಲ. ನಾವು ನಿಮ್ಮ ನ್ನು ಬೆಂಬಲಿಸುತ್ತೇವೆ.
ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಆಡಿಯೋದಲ್ಲಿರುವ ಧ್ವನಿ ವಿಜಯ್ ರೂಪಾನಿಯವರದ್ದೆಂದು ಹೇಳಲಾಗುತ್ತಿದ್ದರೂ ಅದಿನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.







