ಡಿ.9: ‘ಭಾರತ ನರಳುತ್ತಿದೆ-ಜಾಗೃತಿ ಅಭಿಯಾನ ಸಮಾರೋಪ
ಉಳ್ಳಾಲ, ನ.30:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ ನರಳುತ್ತಿದೆ’-ಜಾಗೃತಿ ಅಭಿಯಾನ ಡಿ.9ರಂದು ಸಮಾರೋಪಗೊಳ್ಳಲಿದೆ ಎಂದು ಮಂಗಳೂರು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ರವೂಫ್ ಗುರುವಾರ ತೊಕ್ಕೊಟ್ಟುವಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಭಿಯಾನದ ಪ್ರಯುಕ್ತ ಮಂಗಳೂರು ವಿದಾನಸಭಾ ಕ್ಷೇತ್ರ ಯುವಕಾಂಗ್ರೆಸ್ ವತಿಯಿಂದ ವಿವಿಧ ಭಾಗಗಳಲ್ಲಿ ಬೀದಿ ನಾಟಕ, ಸಂಚಾರಿ ವಾಹನದಲ್ಲಿ ಎಲ್‌ಸಿಡಿ ಪದರೆ ಮುಖಾಂತರ ದೃಶ್ಯಾವಳಿ ಪ್ರದರ್ಶನ, ಭಿತ್ತಿಪತ್ರಗಳ ವಿತರಣೆ ನಡೆಯಲಿದೆ. ಕೇಂದ್ರ ಸರಕಾರ ಚುನಾವಣೆ ಸಂದರ್ಭ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ನೋಟು ಅಮಾನ್ಯ ಹಾಗೂ ಯಾವುದೇ ಸಿದ್ಧತೆ ಇಲ್ಲದೆ ಜಿಎಸ್‌ಟಿ ಹೇರಿಕೆಯ ಪರಿಣಾಮ ದೇಶದ ಉದ್ಯಮ ವಲಯ ತಲ್ಲಣಗೊಳ್ಳುವಂತೆ ಮಾಡಿದೆ. ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳ ದರ ವಿಪರೀತವಾಗಿ ಏರಿಕೆಯಾಗುತ್ತಿದೆ. ಕಪ್ಪುಹಣ ಹಾಗೂ ಭಯೋತ್ಪಾದನೆ ನಿಯಂತ್ರಣ ಸಾಧ್ಯವಾಗಿಲ್ಲ. ಚುನಾವಣೆ ಹಿತದೃಷ್ಟಿಯಿಂದ ಕೆಲವು ವಸ್ತುಗಳ ತೆರಿಗೆ ಇಳಿಸಿ ಜನರನ್ನು ವಂಚಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ಯುವ ಕಾಂಗ್ರೆಸ್ ಮುಖಂಡರಾದ ರಿಯಾಝ್ ಅಹ್ಮದ್, ಜಾಫರ್ ಯು.ಎನ್., ನಾಸಿರ್ ಸಾಮಾಣಿಗೆ, ಹಾಸೀರ್, ಸ್ಟೀವನ್ ಮನೋಜ್, ಸಾದಿಕ್ ಕಲ್ಲಾಪು ಉಪಸ್ಥಿತರಿದ್ದರು.





