ಪೇಜಾವರ ಶ್ರೀ, ಗೋ.ಮಧುಸೂಧನ್ ವಿರುದ್ಧ ದಸಂಸ ಪ್ರತಿಭಟನೆ

ಚಾಮರಾಜನಗರ, ನ.28: ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಪೇಜಾವರ ಶ್ರೀ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ವಿರುದ್ಧ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರ ದೇವಾಲಯದ ಎದುರು ನೂರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಸಮಾವೇಶಗೊಂಡು, ಪೇಜಾವರ ಶ್ರೀ ಹಾಗೂ ಗೋ. ಮಧುಸೂದನ್‍ರವರಿಗೆ ಧಿಕ್ಕಾರ ಕೂಗಿ, ಭಿತ್ತಿ ಪತ್ರ ಹಿಡಿದು ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಂವಿಧಾನ ಒಪ್ಪುವುದಿಲ್ಲ ಎಂದು ಉಡಿಪಿಯಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಬಹಿರಂಗ ಹೇಳಿಕೆ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಗೋ.ಮಧುಸೂದನ್‍ರವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನಕಾರರು ಇದೇ ವೇಳೆ ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಮನವಿ ಪತ್ರ ಸಲ್ಲಿಸಿದರು.





