ವೇಶ್ಯಾವಾಟಿಕೆ ದಂಧೆ: ಐವರ ಬಂಧನ
ಬೆಂಗಳೂರು, ನ.30: ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ನಗರದ ನಾಗರ ಬಾವಿಯ ಅಶೋಕ್ ಕೆ.ಟಿ, ಮಂಡ್ಯ ಜಿಲ್ಲೆಯ ಶಿವಕುಮಾರ್, ತುಮಕೂರಿನ ಶ್ರೀಧರ್, ಮಂಡ್ಯದ ಅಭಿಷೇಕ್ ಹಾಗೂ ಶ್ರೀನಗರದ ನವೀನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸರಹದ್ದಿನ ಲಾಡ್ಜ್‌ನಲ್ಲಿ ಹೊರ ರಾಜ್ಯದ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದರು.
ದಾಳಿ ವೇಳೆ ಐವರು ಆರೋಪಿಗಳನ್ನು ಬಂಧಿಸಿ, ಮೂವರು ಯುವತಿಯರನ್ನು ಈ ಅಕ್ರಮ ಜಾಲದಿಂದ ರಕ್ಷಿಸಲಾಗಿದೆ. ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ಇಲ್ಲಿಗೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದಾಗಿ ಈ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.





