ದೇಶದ ಒಳಿತಿಗೆ ಕೈಗೊಂಡ ಕ್ರಮಗಳಿಗೆ ರಾಜಕೀಯ ಬೆಲೆ ತೆರಲು ಸಿದ್ಧ:ಪ್ರಧಾನಿ ಮೋದಿ

ಹೊಸದಿಲ್ಲಿ,ನ.30: ಕಪ್ಪುಹಣವನ್ನು ಹತ್ತಿಕ್ಕುವ ನಿರ್ಧಾರವನ್ನಿಂದು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಒಳಿತಿಗಾಗಿ ತಾನು ಕೈಗೊಂಡಿರುವ ಕ್ರಮಗಳಿಗಾಗಿ ಯಾವುದೇ ರಾಜಕೀಯ ಬೆಲೆಯನ್ನು ತೆರಲು ತಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಮತ್ತು ಪ್ರಜಾ ಕೇಂದ್ರಿತವಾಗಿರುವ ಅಭಿವೃದ್ಧಿ ಪರ ಪರಿಸರ ವ್ಯವಸ್ಥೆಯನ್ನು ರೂಪಿಸಲು ತನ್ನ ಸರಕಾರವು ಕಟಿಬದ್ಧವಾಗಿದೆ ಎಂದೂ ಅವರು ನುಡಿದರು.
ಹಿಂದುಸ್ಥಾನ ಟೈಮ್ಸ್ ನಾಯಕತ್ವ ಶೃಂಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮೋದಿ, ಸಮಾನಾಂತರ ಆರ್ಥಿಕತೆಯ ಭಾಗವಾಗಿದ್ದ ಕಪ್ಪುಹಣವು ನೋಟು ಅಮಾನ್ಯದ ಬಳಿಕ ವಿಧ್ಯುಕ್ತ ವ್ಯವಸ್ಥೆಯಲ್ಲಿ ಸೇರಿಕೊಂಡಿದೆ. ನೋಟು ಅಮಾನ್ಯದ ಬಳಿಕ ಲಭಿಸಿರುವ ಮಾಹಿತಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಲು ಸರಕಾರಕ್ಕೆ ನೆರವಾಗುತ್ತಿವೆ ಎಂದು ಹೇಳಿದರು.
ಜನರಿಗೆ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಸೋರಿಕೆಗಳನ್ನು ತಡೆಗಟ್ಟುವಲ್ಲಿ ಆಧಾರ್‌ನ ಪಾತ್ರವನ್ನು ಶ್ಲಾಘಿಸಿದ ಅವರು,ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿಯೂ ಆಧಾರ್ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯಪಿಎ ಸರಕಾರದ ವಿರುದ್ಧ ದಾಳಿ ನಡೆಸಿದ ಪ್ರಧಾನಿ, 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಹದಗೆಟ್ಟಿದ್ದ ಹಣಕಾಸು ಸ್ಥಿತಿ, ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕತೆ ಮತ್ತು ಆಡಳಿತ ಅದಕ್ಕೆ ಬಳುವಳಿಯಾಗಿ ದೊರಕಿದ್ದವು ಎಂದರು. ಆದರೂ ಆಗಿನ ಸ್ಥಿತಿಯನ್ನು ಕಠಿಣ ಎಂದು ಬಣ್ಣಿಸಲಾಗಿರಲಿಲ್ಲ ಎಂದು ಮಾಧ್ಯಮಗಳನ್ನು ಛೇಡಿಸಿದ ಅವರು, ಆಗ ಮಾಧ್ಯಮಗಳು ‘ನೀತಿ ನಿಷ್ಕ್ರಿಯತೆ ’ಎಂಬ ಶೀರ್ಷಿಕೆಯಡಿ ಸೌಮ್ಯಶಬ್ದಗಳಲ್ಲಿ ವರದಿಗಳನ್ನು ನೀಡುತ್ತಿದ್ದವು, ಪರಿಸ್ಥಿತಿಯನ್ನು ವಿವರಿಸಲು ಕಠಿಣ ಶಬ್ದಗಳನ್ನು ಬಳಸಲಾಗಿರಲಿಲ್ಲ ಎಂದರು.
ಹಿಂದಿನ ಸರಕಾರದ ಆಡಳಿತದಲ್ಲಿ ಭ್ರಷ್ಟಾಚಾರವೇ ಶಿಷ್ಟಾಚಾರವಾಗಿತ್ತು. ದೇಶವನ್ನು ಬದಲಿಸಲು ಯಾವುದೇ ಜಾದೂ ಇಲ್ಲ ಎನ್ನುವುದು ನನಗೆ ಗೊತ್ತು. ಆದರೆ ನಾವು ಏನನ್ನೂ ಮಾಡದೆ ಕುಳಿತುಕೊಳ್ಳುವಂತಿಲ್ಲ. ಏನನ್ನೂ ಮಾಡದ ವ್ಯಕ್ತಿಗಳಲ್ಲಿ ಹತಾಶ ಭಾವನೆಗಳು ತುಂಬಿರುತ್ತವೆ ಮತ್ತು ಇಂತಹ ಧೋರಣೆ ಅಪಾಯಗಳನ್ನು ಎದುರು ಹಾಕಿಕೊಳ್ಳದಂತೆ ನಮ್ಮನ್ನು ತಡೆಯುತ್ತದೆ ಎಂದರು.
ಕಳೆದ 70 ವರ್ಷಗಳಿಂದಲೂ ಜನರು ವ್ಯವಸ್ಥೆಯೊಂದಿಗೆ ಹೋರಾಡುತ್ತಲೇ ಇದ್ದರು. ವ್ಯವಸ್ಥೆಯು ಅಭಿವೃದ್ಧಿ ಮತ್ತು ಯಶಸ್ಸಿನ ಸಾಧನೆಯಲ್ಲಿ ತೊಡಕಾಗಿತ್ತು. ವ್ಯವಸ್ಥೆಯೊಂದಿಗೆ ಜನತೆಯ ಹೋರಾಟ ಅಂತ್ಯಗೊಳ್ಳಬೇಕು ಮತ್ತು ಬದುಕಿನಲ್ಲಿ ನೆಮ್ಮದಿ ಹೆಚ್ಚಬೇಕು ಎನ್ನುವುದು ನನ್ನ ಪ್ರಯತ್ನ ಮತ್ತು ಬದ್ಧತೆಯಾಗಿದೆ ಎಂದರು.
ಎಲ್‌ಇಡಿ ಬಲ್ಬ್‌ಗಳನ್ನು ಪರಿಚಯಿಸುವ ಮೂಲಕ 14,000 ಕೋ.ರೂ.ಗಳನ್ನು ಉಳಿಸಲಾಗಿದೆ ಎಂದ ಮೋದಿ, ನೀವು ಈ ಸಂಖ್ಯೆಯನ್ನು ನಂಬಲಿಕ್ಕಿಲ್ಲ. 14,000 ಕೋ.ರೂ.ವೆಚ್ಚದಲ್ಲಿ ಯೋಜನೆಯೊಂದನ್ನು ಸರಕಾರವು ಆರಂಭಿಸಿದ್ದರೆ ಮುಂದಿನ 50 ವರ್ಷಗಳವರೆಗೆ ಮಧ್ಯಮ ಆದಾಯ ವರ್ಗದ ವೋಟ್‌ಬ್ಯಾಂಕ್‌ನ್ನು ನಾನು ಗಳಿಸಿರುತ್ತಿದ್ದೆ ಎಂದರು.







