‘ಸಾಮರಸ್ಯದ ನಡಿಗೆ ಸೌಹಾರ್ದತೆಯೆಡೆಗೆ’ ಪಾದಯಾತ್ರೆಯ ಲಾಂಛನ, ಭಿತ್ತಿಪತ್ರ ಬಿಡುಗಡೆ
ಫರಂಗಿಪೇಟೆಯಿಂದ ಮಾಣಿವರೆಗೆ ಸಮಾನಮನಸ್ಕ ಸಂಘಟನೆಗಳ ನಡಿಗೆ

ಮಂಗಳೂರು.ನ.30:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಕದಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಡಿ.12ರಂದು ‘ಸಾಮರಸ್ಯದ ನಡಿಗೆ ಸೌಹಾರ್ದತೆಯೆಡೆಗೆ’ ಪಾದಯಾತ್ರೆ ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿದೆ ಎಂದು ರಾಜ್ಯ ಅರಣ್ಯಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ವಿವಿಧ ಪಕ್ಷ ಹಾಗೂ ಸಮಾನ ಮನಸ್ಕರ ಸಂಘಟನೆಗಳ ಮುಖಂಡರೊಂದಿಗೆ ಪಾದಯಾತ್ರೆಯ ಲಾಂಛನ ಮತ್ತು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಾತ್ಯತೀತ ನಿಲುವಿನ ಎಲ್ಲಾ ಪಕ್ಷ,ಸಂಘಟನೆಗಳು ಹಾಗೂ ಸಾರ್ವಜನಿಕರೊಂದಿಗೆ ಈ ಪಾದಯಾತ್ರೆ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ವಿದ್ಯಾವಂತರ,ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದರೂ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಯಾಗುವ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸೇರಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ರಮಾನಾಥ ರೈ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ವಾತವರಣ ಸೃಷ್ಟಿಯಾದಾಗ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಬಂದ ಸಲಹೆಯ ಪ್ರಕಾರ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.ಆದರೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೆ ನಿಗದಿಯಾಗಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿತ್ತು ಎಂದು ರಮಾನಾಥ ರೈ ತಿಳಿಸಿದ್ದಾರೆ.
ಹತ್ಯೆಯಲ್ಲಿ ಭಾಗಿಯಾದವರನ್ನು ಹೊರತು ಪಡಿಸಿ ಎಲ್ಲರಿಗೂ ಅವಕಾಶವಿದೆ:ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಹತ್ಯೆಗೀಡಾದವರ ಹತ್ಯೆಯಲ್ಲಿ ಭಾಗಿಯಾದವರನ್ನು ಮತ್ತು ಭಾಗಿಯಾದ ಸಂಘಟನೆಯನ್ನು ಹೊರತು ಪಡಿಸಿ ಎಲ್ಲರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ರಮಾನಾಥ ರೈ ತಿಳಿಸಿದ್ದಾರೆ.
ಪಾದಯಾತ್ರೆಯ ವಿವರ :ಪಾದಯಾತ್ರೆಯನ್ನು ಜನರ ಸಂಚಾರಕ್ಕೆ ತೊಂದರೆಯಾಗಬಹುದು ಎನ್ನುವ ನಿಟ್ಟಿನಲ್ಲಿ ಡಿ.12ರಂದು ಮಂಗಳೂರು ನಗರದ ಹೊರವಲಯದ ಫರಂಗಿಪೇಟೆಯಿಂದ ಬೆಳಗ್ಗೆ 9 ಗಂಟೆಗೆ ಆರಂಭಗೊಂಡು ಸಂಜೆ 4.30ಗಂಟೆಗೆ ಮಾಣಿಯಲ್ಲಿ ಸಮಾರೋಪಗೊಳ್ಳಲಿದೆ.ಪಾದಯಾತ್ರೆಯ ಪೂರ್ವಭಾವಿಯಾಗಿ ಎಲ್ಲಾ ತಾಲೂಕುಗಳಲ್ಲಿಯೂ ತಯಾರಿ ಸಭೆ ನಡೆಸಲಾಗುವುದು.ಪಾದಯಾತ್ರೆ ಶಾಂತಿಯುತವಾಗಿ ನಡೆಯಲಿದೆ.ಕಾನೂನಿನ ಬಗ್ಗೆ ಗೌರವ ಇರುವ ನಾವು ಸಾರ್ವಜನಿಕರಿಗೂ ತೊಂದರೆಯಾಗದಂತೆ ಜಾಥ ನಡೆಸುವ ಉದ್ದೇಶ ಹೊಂದಿರುವುದಾಗಿ ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಐವನ್ ಡಿ ಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್,ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ,ಅಹಿಂದ ಮುಖಂಡರಾದ ವಾಸುದೇವ ಬೋಳೂರು,ದಲಿತ ಸಂಘಟನೆಗಳ ಮುಖಂಡರಾದ ಎಂ.ದೇವದಾಸ,ಚಂದು .ಎಲ್,ರಘು ಎಕ್ಕಾರು ,ಸರೋಜಿನಿ,ಕೇಶವ ಪಿ,ವಿಶುಕುಮಾರ್ ,ಬಿ.ಕೆ.ವಸಂತ,ನೇಮಿರಾಜ್,ಸಿಪಿಐ ಮುಖಂಡರಾದ ಸೀತಾರಾಮ ಬೇರಿಂಜೆ, ಕರುಣಾಕರ,ಕೆ.ತಿಮ್ಮಪ್ಪ,ನ್ಯಾಯವಾದಿಗಳಾದ ನಾರಾಯಣ ಪೂಜಾರಿ,ಮುಹಮ್ಮದ್ ಹನೀಫ್,ಸಮುದಾಯ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ್,ರೈತ ಸಂಘಟನೆಯ ಮುಖಂಡರಾದ ರವಿಕಿರಣ ಪುಣಚ,ಸುರೇಶ್ ಭಟ್,ಯಾದವ ಶೆಟ್ಟಿ,ಹಿರಿಯ ಸಾಮಾಜಿಕ ಕಾರ್ಯಕರ್ತೆ ರೀಟಾ ನರ್ಹೋನ್ನಾ,ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್,ಡಿವೈಎಫ್‌ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ,ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಸಂಚಾಲಕ ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.







