ಪ್ರಧಾನಿಯೊಬ್ಬರು ಎಲ್ಲಾ ಕ್ಷೇತ್ರದಲ್ಲಿ ಭಾಷಣ ಮಾಡುತ್ತಿರುವುದು ಇದೇ ಮೊದಲು: ಸಿಎಂ ಸಿದ್ದರಾಮಯ್ಯ
"ಮೋದಿಯವರಿಗೆ ಸೋಲುವ ಭಯ ಉಂಟಾಗಿದೆ"

ಮೈಸೂರು, ನ.30: ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲುವ ಭಯ ಉಂಟಾಗಿದೆ. ಹಾಗಾಗಿ ಅವರು ಆ ಭಾಗದ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಒಬ್ಬ ದೇಶದ ಪ್ರಧಾನಿ ಈ ರೀತಿ ಎಲ್ಲಾ ಕ್ಷೇತ್ರದಲ್ಲಿ ಭಾಷಣ ಮಾಡುತ್ತಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿಯವರ ಚುನಾವಣಾ ಭಾಷಣಗಳಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ, ಪ್ರಚಾರದ ಭಾಷಣದಲ್ಲಿ ಸತ್ಯ ಹೇಳುತ್ತಾರಾ? ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಸಿದರು.
ಧರ್ಮ ಸಂಸದ್ ನಲ್ಲಿ ಬಂದಿದ್ದವರು ಜಾತ್ಯಾತೀತವಾದಕ್ಕೆ ವಿರುದ್ಧವಾಗಿದ್ದವರು, ಸಂವಿಧಾನಕ್ಕೆ ವಿರುದ್ಧವಾಗಿ ಯಾರೂ ನಿರ್ಣಯ ಮಾಡಲಿಕ್ಕೆ ಸಾಧ್ಯವಿಲ್ಲ. ಅಲ್ಲದೆ, ಸಂವಿಧಾನದ ಮೂಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಧರ್ವ ಸಂಸದ್ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಪೇಜಾವರ ಶ್ರೀ ಅಲ್ಲ ಯಾವ ಶ್ರೀಗಳ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದವರು, ಈ ಬಾರಿ ಕರಾವಳಿ ಭಾಗದಲ್ಲಿ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ನಾವು ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ನಿಲ್ಲಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎಚ್.ಡಿ.ದೇವೇಗೌಡ ಅವರು ರಾಜಕಾರಣಕ್ಕೆ ಆ ರೀತಿ ಹೇಳಿದ್ದಾರೆ. ರಾಜ್ಯವನ್ನು 'ಹಸಿವು ಮುಕ್ತ' ಮಾಡಲೇ ಬೇಕು. ಇದಕ್ಕಾಗಿ ನಾವು ಅನ್ನ ಭಾಗ್ಯ ಯೋಜನೆ ಮಾಡಿದ್ದೇವೆ. ಜನರಿಗೆ ಕೆಲಸ ನೀಡಲು ನಮ್ಮಲ್ಲಿ ಹಲವು ಯೋಜನೆ ಇದೆ. ಆದರೆ ಹಸಿವು ಮುಕ್ತಮಾಡೋದು ಅಷ್ಟೇ ಅವಶ್ಯಕವಾಗಿದೆ ಎಂದರು.
ಇನ್ನೂ ವಿನಯ್ ಕುಲಕಣಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೋರ್ಟ್‍ನಲ್ಲಿ ಹೋಗಿ ಸಾಕ್ಷ್ಯ ನಾಶಮಾಡಲು ಸಾಧ್ಯವೇ, ಸಚಿವ ವಿನಯ್‍ಕುಲಕರ್ಣಿ ಮೇಲೆ ರಾಜಕೀಯ ಉದ್ದೇಶದಿಂದ ಆರೋಪ ಮಾಡಿದ್ದಾರೆ ಅಷ್ಟೆ ಎಂದು ಸಿದ್ದ ರಾಮಯ್ಯ ಸ್ಪಷ್ಟಪಡಿಸಿದರು.







