ಕಾರ್ಮಿಕರಿಗೆ ಬಸ್ ಪಾಸ್ ವಿತರಣೆಗೆ ವಿರೋಧ ಸರಿಯಲ್ಲ: ಎಂಪ್ಲಾಯಿಸ್ ಯೂನಿಯನ್
ಬೆಂಗಳೂರು, ನ.30: ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ಬಳಸಿಕೊಂಡು ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಯೋಜನೆಯನ್ನು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಕೆ.ಆರ್.ವಿಜಯ್ ಕುಮಾರ್, ನಗರದಲ್ಲಿ 3 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ರಾಜ್ಯ ಸರಕಾರದ ನಿರ್ಧಾರದಿಂದ ಮೂರು ಲಕ್ಷದಲ್ಲಿ ಕನಿಷ್ಟ ಅರ್ದದಷ್ಟು ಜನರು ಪಾಸ್ ಸೌಲಭ್ಯ ಪಡೆದುಕೊಂಡರೂ, ಮಂಡಳಿಯಿಂದ ವಾರ್ಷಿಕ 189 ಕೋಟಿ ರೂ.ಗಳು ಮಾತ್ರ ಖರ್ಚಾಗಲಿದೆ. ಅಲ್ಲದೆ, ಇದರಿಂದ ಬಿಎಂಟಿಸಿಗೂ ಅಧಿಕ ಲಾಭವಾಗುತ್ತದೆ. ಆದರೆ, ಕೆಲವು ಕಾರ್ಮಿಕ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಬಿಎಂಟಿಸಿ ಬಸ್ ಪಾಸ್ ಅನ್ನು ಕಾರ್ಮಿಕರಿಗೆ ಕೊಡುವುದರಿಂದ ವಾಸಸ್ಥಳ ಹಾಗೂ ಕೆಲಸದ ಸ್ಥಳಗಳಿಗೆ ಪ್ರಯಾಣಿಸಲು ವೆಚ್ಚ ಮಾಡುವ ಹಣ ಉಳಿತಾಯವಾಗುತ್ತದೆ. ಅಲ್ಲದೆ, ಹಲವರು ದ್ವಿಚಕ್ರ ವಾಹನ ಬಳಕೆ ಮಾಡುತ್ತಿದ್ದು, ಅವರಿಗೆಲ್ಲಾ ಬಸ್ ಪಾಸ್ ದೊರೆತರೆ ಸ್ವಂತ ವಾಹನ ಬಳಕೆ ಮಾಡುವುದು ನಿಲ್ಲಿಸಿ ಸಾರ್ವಜನಿಕ ಸಾರಿಗೆ ಬಳಕೆ ಮಾಡುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಹೀಗಾಗಿ, ಕಾರ್ಮಿಕ ಸಂಘಟನೆಗಳು ವಿರೋಧ ಮಾಡುವ ಬದಲು ಈ ಕುರಿತು ಯೋಚನೆ ಮಾಡಬೇಕು ಎಂದು ಅವರು ತಿಳಿಸಿದರು.







