‘ಹೆಣ್ಣುಮಕ್ಕಳ ಶಾಪ ಒಳ್ಳೆಯದಲ್ಲ’: ಯಡಿಯೂರಪ್ಪಗೆ ವಿನಯ್ ಪತ್ನಿ ಶೋಭಾ ಪತ್ರ

ಬೆಂಗಳೂರು, ನ.30: ‘ಯಡಿಯೂರಪ್ಪನವರೇ ನಿಮಗೆ ಹೆಣ್ಣುಮಕ್ಕಳ ಶಾಪ ಒಳ್ಳೆಯದಲ್ಲ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಸೊಸೆಯರಿದ್ದಾರೆ. ಅವರಿಗೂ ಹೀಗೆ ಆದರೆ ಸುಮ್ಮನಿರುತ್ತೀರಾ?’ ಎಂದೆಲ್ಲಾ ಪ್ರಶ್ನಿಸಿ ಅಪಹರಣ ಪ್ರಕರಣ ಸಂಬಂಧ ವಿನಯ್ ಅವರ ಪತ್ನಿ ಶೋಭಾ ಮೂರು ಪುಟಗಳ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ರವಾನಿಸಿದ್ದಾರೆ.
ಮಂಗಳವಾರ(ನ.28) ಶೋಭಾ ವಿನಯ್ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದೇ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳ ಮಂಜುನಾಥ ದೇವಾಲಯ, ನಂಜುಂಡೇಶ್ವರ ದೇವಾಲಯ ಹಾಗೂ ಶ್ರೀಧರಸ್ವಾಮಿ ಸಾಗರ ದೇವಾಲಯಗಳಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರದಲ್ಲಿ ಏನಿದೆ: "ನಾನು(ಶೋಭಾ) ನನ್ನ ಪತಿ(ವಿನಯ್) ಇಬ್ಬರು ಅವಳಿ ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ನನ್ನ ಯಜಮಾನರು ಬಿಜೆಪಿಯಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದಾರೆ. ಸಂತೋಷ್(ಬಿ.ಎಸ್.ಯಡಿಯೂರಪ್ಪ ಆಪ್ತ) ಎಂಬ ಕ್ರಿಮಿನಲ್, ನನ್ನ ಗಂಡನ ಸ್ನೇಹ ಗಳಿಸಿ ಇವರ ಹಿಂದೆ ಮುಂದೆ ತಿರುಗುತ್ತಿದ್ದ. ಅಲ್ಲದೆ, ನಮ್ಮ ಮನೆಗೆ ಬಂದು ತಿಂಡಿ ಮಾಡಿಕೊಡಿ ಎಂದು ಕೇಳಿ ನನ್ನ ಕೈಯಾರೆ ತಿಂಡಿ ಮಾಡಿಸಿಕೊಂಡು ತಿನ್ನುತ್ತಿದ್ದ. ನನ್ನ ಪತಿ ಜತೆ ಕೆಲಸ ಮಾಡಿ ಇದೀಗ ನನ್ನ ಗಂಡನ ಹತ್ಯೆಗೆ ಸಂತೋಷ್ ಸಂಚು ರೂಪಿಸಿದ್ದಾನೆ" ಎಂದು ಪತ್ರದಲ್ಲಿ ಶೋಭಾ ಆರೋಪಿಸಿದ್ದಾರೆ.
"ಇದು ಅತ್ಯಂತ ದುಃಖಕರ ವಿಚಾರ. ನಿಮ್ಮ ಸಂತೋಷ್ ನಿಯತ್ತು ಇಲ್ಲದ ವ್ಯಕ್ತಿ. ಅನ್ನ ತಿಂದ ಮನೆಗೆ ದ್ರೋಹ ಬಗೆದಿದ್ದಾನೆ. ಅವನ ಪರ ನೀವು ನಿಂತಿದ್ದೀರಿ. ಇದು ಸರಿಯೇ? ನೆನಪಿರಲಿ ನಿಮಗೂ ಒಂದಲ್ಲಾ ಒಂದು ದಿನ ಇವನಿಂದ ತೊಂದರೆ ತಪ್ಪಿದ್ದಲ್ಲ" ಎಂದು ಯಡಿಯೂರಪ್ಪಗೆ ಶೋಭಾ ಪತ್ರದಲ್ಲಿ ಎಚ್ಚರಿಸಿದ್ದಾರೆ.
"ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಿಮಗೂ ಮೂರು ಮಂದಿ ಹೆಣ್ಣು ಮಕ್ಕಳಿದ್ದಾರೆ. ನಿಮ್ಮ ಮಕ್ಕಳಿಗೂ ನನ್ನ ಕಷ್ಟ ಬಂದಿದ್ದರೆ ನೀವು ಏನು ಮಾಡುತ್ತಿದ್ದೀರಿ" ಎಂದು ಪತ್ರದಲ್ಲಿ ಪ್ರಶ್ನಿಸಿರುವ ಶೋಭಾ ವಿನಯ್, "ಆರೋಪಿ ಸಂತೋಷ್‌ನನ್ನು ಹಿಡಿಯಲು ಪೊಲೀಸರು ನಿಮ್ಮ ಮನೆಗೆ ಬಂದಾಗ ನಿಮ್ಮ ಪ್ರಭಾವ ಬಳಸಿ ಆತನನ್ನು ಕಾಪಾಡಿದ್ದೀರಿ. ಇದೇನಾ ನೀವು ಕಾನೂನಿಗೆ ನೀಡುವ ಗೌರವ?" ಎಂದು ಪ್ರಶ್ನಿಸಿದ್ದಾರೆ.
"ನಿಮ್ಮ ಪಕ್ಷದ ಯಾವೊಬ್ಬ ಮುಖಂಡನು ಸೌಜನ್ಯಕ್ಕೂ ನನಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಇದೇನಾ ನಿಮ್ಮ ಪಕ್ಷದವರು ಮಾಡುವ ಕೆಲಸ? ನಿಮ್ಮನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೆಣ್ಣುಮಕ್ಕಳ ಶಾಪ ಒಳ್ಳೆಯದಲ್ಲ. ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಿ" ಎಂದು ಪತ್ರದಲ್ಲಿ ಶೋಭಾ ಮನವಿ ಮಾಡಿದ್ದಾರೆ.







