ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಆದ್ಯತೆ: ನೂತನ ಮುಖ್ಯಕಾರ್ಯದರ್ಶಿ ರತ್ನಪ್ರಭಾ

ಬೆಂಗಳೂರು, ನ.30: ರಾಜ್ಯ ಸರಕಾರದ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಜನಸ್ಪಂದನ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ತನ್ನ ಆದ್ಯತೆ ಎಂದು ನೂತನ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿದ್ದಾರೆ.
ಗುರುವಾರ ಸೇವೆಯಿಂದ ನಿವೃತ್ತರಾದ ಡಾ.ಸುಭಾಷ್‌ಚಂದ್ರ ಕುಂಟಿಯಾ ಅವರಿಂದ ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಣೆ ಮಾಡುವುದು ವೈಯಕ್ತಿಕವಾಗಿ ನನಗೆ ಸಂತೋಷ ಕೊಡುವ ಕೆಲಸವಾಗಿದ್ದು, ಅಪರ ಮುಖ್ಯ ಕಾರ್ಯದರ್ಶಿ ಯಾಗಿದ್ದಾಗಲೂ ಇದನ್ನು ನಿರ್ವಹಿಸಿದ್ದೇನೆ. ಈಗ ಮುಖ್ಯ ಕಾರ್ಯದರ್ಶಿಯಾಗಿಯೂ ಅದನ್ನು ಮುಂದುವರೆಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ಭರವಸೆಯಿಟ್ಟು ಈ ಮಹತ್ವದ ಜವಾಬ್ದಾರಿ ಹುದ್ದೆಗೆ ನೇಮಕ ಮಾಡಿದ್ದಾರೆ. ಸರಕಾರ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಆರಂಭಿಸಿದ ನಾನು ಆನಂತರ, ಬೀದರ್ ಜಿಲ್ಲೆಯ ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು, ರಾಯಚೂರು, ಕಲಬುರಗಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಸೇವಾವಧಿಯುದ್ದಕ್ಕೂ ಜನರ ಒಳಿತಿಗಾಗಿ ಹಗಲು ರಾತ್ರಿ ಶ್ರಮಿಸಿದ್ದೇನೆ. ಈ ಕಾಯಕವನ್ನು ಮುಂದುವರೆಸುತ್ತೇನೆ ಎಂದು ನುಡಿದರು.
ಮಹಿಳಾ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೆ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, ವಿವಿಧ ಜಿಲ್ಲೆಗಳಿಂದಲೂ ಇದಕ್ಕೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಕಲಬುರಗಿ, ಬಳ್ಳಾರಿ, ಮೈಸೂರು, ಧಾರವಾಡಗಳಲ್ಲಿ ಮಹಿಳೆಯರಿಗಾಗಿಯೆ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು ಎಂದವರು, ಇತರ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಾಕಷ್ಟು ಹೊಂದಾಣಿಕೆ ಇದೆ. ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ, ಅದು ನಮ್ಮ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆ ಚರ್ಚೆ ಮಾಡಿದ್ದೇನೆ. ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕ ಎರಡು ಹುದ್ದೆಗಳಲ್ಲಿ ಮಹಿಳೆಯರೆ ಇರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಭಾವುಕರಾಗಿದ್ದ ರತ್ನಪ್ರಭಾ: ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ತನಗೆ ಅಭಿನಂದಿಸಲು ಬೀದರ್, ಕಲಬುರಗಿ, ರಾಯಚೂರು, ಧಾರವಾಡ, ಮೈಸೂರು, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಲ್ಲ ವರ್ಗದ ಜನರೂ ಬಂದು ಹಾರೈಸಿದ್ದಾರೆ. ಅವರ ಪ್ರೀತಿಗೆ ಆಭಾರಿಯಾಗಿದ್ದೇನೆ. ಬಹುಷಃ ಈ ಹಿಂದೆ ಯಾವ ಮುಖ್ಯಕಾರ್ಯದರ್ಶಿಗೂ ಸಿಗದಷ್ಟು ಜನರ ಪ್ರೀತಿ ನನಗೆ ಸಿಕ್ಕಿದೆ ಎಂದು ರತ್ನಪ್ರಭಾ ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಿ.ವಿ.ಪ್ರಸಾದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಝಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







