ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಕಪಟ ನಾಟಕ: ಕಾಂಗ್ರೆಸ್ ಮುಖಂಡನ ಆರೋಪ

ಮುಂಬೈ, ನ.30: ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆಸಲಾಗುವ ಚುನಾವಣಾ ಪ್ರಕ್ರಿಯೆ ಒಂದು ಕಪಟ ನಾಟಕ. ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‌ನ ಸಾಂಸ್ಥಿಕ ಚುನಾವಣೆ ಎಂಬ ಹೆಸರಿನಲ್ಲಿ ನಾಟಕವಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶೆಹಝಾದ್ ಪೂನಾವಾಲಾ ಆರೋಪಿಸಿದ್ದಾರೆ.
ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಚರ್ಚಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಭಾಗವಹಿಸುವ ಶೆಹಝಾದ್, ಕಾಂಗ್ರೆಸ್‌ನಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದು, ನೈಜ ರೀತಿಯಲ್ಲಿ ಚುನಾವಣೆ ನಡೆಸಿ ತಮ್ಮ ನಾಯಕತ್ವವನ್ನು ಪರೀಕ್ಷೆಗೆ ಒಡ್ಡಿಕೊಳ್ಳುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
ತನಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಆಸಕ್ತಿಯಿದೆ. ಆದರೆ ಚುನಾವಣೆಯಲ್ಲಿ ಮತ ಚಲಾಯಿಸುವವರು ‘ನಿಷ್ಟ’ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು. ಇವರನ್ನು ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿ ರಾಹುಲ್ ಗಾಂಧಿಯ ತಾಯಿ ಸೋನಿಯಾ ಆಯ್ಕೆ ಮಾಡಿದ್ದಾರೆ. ಇವರೆಲ್ಲಾ ತಮ್ಮ ನಿಷ್ಟೆ ಪ್ರದರ್ಶಿಸುವುದರಲ್ಲಿ ಅನುಮಾನವೇ ಇಲ್ಲ ಎಂದರು. ಕಾಂಗ್ರೆಸ್ ಉಪಾಧ್ಯಕ್ಷತೆಗೆ ರಾಜೀನಾಮೆ ನೀಡಿ ಸ್ಪರ್ಧಿಸುವಂತೆ ಅವರು ರಾಹುಲ್‌ಗೆ ಸವಾಲೆಸೆದರು.
ಮುಂದಿನ 50 ವರ್ಷದವರೆಗೆ ಅಧ್ಯಕ್ಷ ಹುದ್ದೆಯು ‘ಗಾಂಧಿ’ಗಳಿಗೆ ಮೀಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ರಾಹುಲ್ ಉಪಾಧ್ಯಕ್ಷತೆಗೆ ರಾಜೀನಾಮೆ ನೀಡಿ ಸ್ಪರ್ಧೆಗೆ ಮುಂದಾದರೆ ತನ್ನಂತಹ ಸಾಮಾನ್ಯ ಕಾರ್ಯಕರ್ತನೂ ಉಮೇದುವಾರಿಕೆ ಸಲ್ಲಿಸಿ ರಾಹುಲ್ ಎದುರು ಸ್ಪರ್ಧಿಸಬಹುದು ಎಂದರು.
ಈ ಬೆಳವಣಿಗೆ ಹಲವಾರು ಕಾಂಗ್ರೆಸ್ ಮುಖಂಡರಿಗೆ ಅಚ್ಚರಿ ತಂದಿದೆ. ಶೆಹಝಾದ್ ಅವರ ಸೋದರ ತೆಹ್ಸೀನ್, ಪ್ರಿಯಾಂಕ ಗಾಂಧಿ(ವಾದ್ರ) ಪತಿ ರಾಬರ್ಟ್ ವಾದ್ರಾರ ಸೋದರಿ ಮೋನಿಕಾರನ್ನು ವಿವಾಹವಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.







