ಜನವರಿ 1ರಿಂದ ಕಾಪು ತಾಲೂಕು: ಮಿನಿ ವಿಧಾನಸೌಧಕ್ಕೆ ಯೋಜನೆ ಸಿದ್ಧ
ಕಾಪು ಪುರಸಭೆಯಲ್ಲಿ ಶಾಸಕ ಸೊರಕೆ

ಪಡುಬಿದ್ರಿ,ನ.30: ಈಗಿರುವ ಬಂಗ್ಲೆ ಪ್ರದೇಶದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಯೋಜನೆ ಸಿದ್ದಪಡಿಸಲಾಗಿದ್ದು, ಕಾಪು ತಾಲ್ಲೂಕು ಕೇಂದ್ರವಾಗಿ ಜನವರಿ ಒಂದರಿಂದ ಕಾರ್ಯಾಚರಿಸಲಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಶುಕ್ರವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಅರಣ್ಯ ಇಲಾಖೆಗೆ ಸೇರಿದ ಒಂದು ವಸತಿಗೃಹವನ್ನು ತೆರವುಗೊಳಿಸಲು ಮನವಿ ಮಾಡಲಾಗಿದೆ ಎಂದರು.
ಪುರಸಭೆಯ 23ನೇ ವಾರ್ಡ್‍ನಲ್ಲಿ ಪರಿಶಿಷ್ಟ ಪಂಗಡದವರಿಗೆ ಸಮುದಾಯ ಭವನ ನಿರ್ಮಿಸಲು ರೂ. 84 ಲಕ್ಷ ಮಂಜೂರಾಗಿ ಟೆಂಡರ್ ಆಗಿದೆ. ಭವನ ನಿರ್ಮಾಣಕ್ಕೆ 20 ಸೆಂಟ್ಸ್ ಜಾಗ ಬೇಕಾಗಿದ್ದು, ಸರಕಾರಿ ಜಮೀನಿನ ಕೊರತೆ ಇದೆ ಎಂದು ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.
ಈ ಬಗ್ಗೆ ಮಾತನಾಡಿದ ಸೊರಕೆ, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನ ಕೊರತೆ ಇದ್ದು, ಅನುದಾನ ಹೊಂದಿಕೆ ಮಾಡಿಕೊಂಡು ಕಡಿಮೆ ಬೆಲೆಗೆ ಖಾಸಗಿ ಜಮೀನು ಖರೀದಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾಪುವಿನ ಮೇಲ್ದರ್ಜೆಗೇರಿರುವ ಸಮುದಾಯ ಆಸ್ಪತ್ರೆಯು ಮುಂದೆ ತಾಲ್ಲೂಕು ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳಲಿದೆ. ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ದಾನಿಗಳ ಹಾಗೂ ಅನಿವಾಸಿ ಭಾರತೀಯರ ಸಹಾಯಹಸ್ತವನ್ನೂ ಚಾಚಾಲಾಗುವುದು ಎಂದು ಸೊರಕೆ ನುಡಿದರು.
ನಗರ ಯೋಜನಾ ಪ್ರಾಧಿಕಾರವು ಬೆಂಗಳೂರು ನಗರ ಮಾನದಂಡವನ್ನು ಅನುಸರಿಸಿದ ಪರಿಣಾಮ ಜನರಿಗೆ ತೊಂದರೆಯಾಗುತ್ತಿದೆ. ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿನಲ್ಲಿಯೇ ಕುಳಿತು ತರಾತುರಿಯಲ್ಲಿ ಭೂಪರಿವರ್ತನೆ, ಭೂ ನಕ್ಷೆಯನ್ನು ಗೂಗಲ್‍ನಲ್ಲಿ ಸಿದ್ದಪಡಿಸಿದ್ದಾರೆ. ಪ್ರಾಧಿಕಾರದಲ್ಲಿ ಅಧಿಕಾರಿಗಳು ಇಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ನಿಯಮ ಅಳವಡಿಸಿ ವಲಯ ರಚನೆ ಮಾಡುವಂತೆ ಸದಸ್ಯರಾದ ಅರುಣ್ ಶೆಟ್ಟಿ ಹಾಗೂ ಕಿರಣ್ ಆಳ್ವ ಒತ್ತಾಯಿಸಿದರು.
ಪ್ರಾಧಿಕಾರ ರಚನೆ ಆಗುವ ಮೊದಲೇ ಭೂ ಪರಿವರ್ತನೆ, ನಕ್ಷೆ ಸಿದ್ದ ಪಡಿಸಲಾಗಿದೆ. ಪ್ರಾಧಿಕಾರದ ಸಭೆ ಡಿಸೆಂಬರ್ 5 ರಂದು ನಡೆಯಲಿದೆ. ಈ ಸಭೆಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸುವಂತೆ ಮುಖ್ಯಾಧಿಕಾರಿ ರಾಯಪ್ಪ ಸೂಚಿಸಿದರು.
ಗ್ರಾಮೀಣ ಪ್ರದೇಶದ ಎಸ್‍ಸಿ, ಎಸ್‍ಟಿ ಜನರಿಗೆ ಅಡುಗೆ ಅನಿಲ ವಿತರಣೆ ಮಾಡಲಾಗಿದೆ. ಆದರೆ ಪುರಸಭೆ ವ್ಯಾಪ್ತಿಯ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸದಸ್ಯೆ ಸುಲೋಚನಾ ಬಂಗೇರ ಅಲವತ್ತುಕೊಂಡರು. ಪುರಸಭಾ ವ್ಯಾಪ್ತಿಯಲ್ಲಿ ಮನೆ ದುರಸ್ತಿಗೆ ಅನುದಾನ ನೀಡದಿರುವ ಬಗ್ಗೆ ಹಮೀದ್ ಮೂಳೂರು ಬೇಸರ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ, ಎಸ್‍ಎಫ್‍ಸಿ ಅನುದಾನದಲ್ಲಿ ಎಸ್‍ಸಿ, ಎಸ್‍ಟಿ ಜನರಿಗೆ ಅನಿಲ ಭಾಗ್ಯ ಕಲ್ಪಿಸಲಾಗುವುದು. ಪುರಸಭೆಯ ಆದಾಯ ಹೆಚ್ಚಿಸಿದಲ್ಲಿ ಬಜೆಟ್‍ನಲ್ಲಿ ಮನೆ ದುರಸ್ತಿಗೆ ಅನುದಾನ ಮೀಸಲಿಡುವುದಾಗಿ ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಇದ್ದರು.







