ಅತ್ಯಾಚಾರ ಸಂತ್ರಸ್ತೆ ಕುರಿತ ಹೇಳಿಕೆ: ಬಿಜೆಪಿ ಸಂಸದೆ ಕಿರಣ್ ಖೇರ್ ವಿರುದ್ಧ ಆಕ್ರೋಶ

ಚಂಡೀಗಡ, ನ.30: ಚಂಡೀಗಡದಲ್ಲಿ 22ರ ಹರೆಯದ ಮಹಿಳೆಯ ಮೇಲೆ ಆಟೋರಿಕ್ಷಾ ಚಾಲಕ ಸೇರಿ ಮೂವರು ಅತ್ಯಾಚಾರ ನಡೆಸಿದ ಘಟನೆಯ ಕುರಿತು ಬಿಜೆಪಿ ಸಂಸದೆ ಕಿರಣ್ ಖೇರ್ ನೀಡಿದ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
“ಎಲ್ಲಾ ಹುಡುಗಿಯರಿಗೂ ನಾನೊಂದು ಮಾತನ್ನು ಹೇಳಲು ಬಯಸುತ್ತೇನೆ. ಆಟೊರಿಕ್ಷಾದಲ್ಲಿ ಈಗಾಗಲೇ ಮೂವರಿದ್ದಾಗ ನೀವು ಕೂಡಾ ಅದರಲ್ಲೇ ಪ್ರಯಾಣಿಸಬೇಡಿ” ಎಂದು ಖೇರ್ ಹೇಳಿಕೆ ನೀಡಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಖೇರ್ ನೀಡಿದ ಹೇಳಿಕೆ ಓದಿ ದಿಗ್ಭ್ರಾಂತನಾದೆ. ಗಂಭೀರವಾದ ವಿಷಯದ ಬಗ್ಗೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಇದರ ಬದಲು ಚಂಡೀಗಡವನ್ನು ಮಹಿಳೆಯರಿಗೆ ಸುರಕ್ಷಿತ ಪ್ರದೇಶವನ್ನಾಗಿ ಯಾವ ರೀತಿ ಮಾಡಬಹುದು ಎಂಬ ಬಗ್ಗೆ ಅವರು ಹೇಳಬಹುದಿತ್ತು ಎಂದು ಕಾಂಗ್ರೆಸ್ ಮುಖಂಡ ಪವನ್ ಕುಮಾರ್ ಬನ್ಸಾಲ್ ಟೀಕಿಸಿದ್ದಾರೆ.
ಆದರೆ ತನ್ನ ಹೇಳಿಕೆಯನ್ನು ಖೇರ್ ಸಮರ್ಥಿಸಿಕೊಂಡಿದ್ದಾರೆ. ಇದರಲ್ಲೂ ರಾಜಕೀಯ ಹುಡುಕುವುದು ಬೇಡ. ಹುಡುಗಿಯರು ಸದಾಕಾಲ ಜಾಗರೂಕರಾಗಿರಬೇಕು ಎಂದಷ್ಟೇ ನಾನು ಹೇಳಿದ ಮಾತಿನ ಅರ್ಥ ಎಂದು ಕಿರಣ್ ಖೇರ್ ತಿಳಿಸಿದ್ದಾರೆ.





