ದಲಿತ ಕಾಲೋನಿಗೆ ರಸ್ತೆಗಾಗಿ ಆಗ್ರಹ: ದಲಿತ ಮುಖಂಡರಿಂದ ಪ್ರತಿಭಟನೆ

ಪುತ್ತೂರು,ನ.30: ದಲಿತ ಕಾಲೋನಿಗೆ ಹೋಗುವ ಕಾಲು ದಾರಿಯನ್ನು ಸಂಪರ್ಕ ರಸ್ತೆಯನ್ನಾಗಿಸಬೇಕು ಎಂದು ಆಗ್ರಹಿಸಿ ಪುತ್ತೂರಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಶೇಕಮಲೆ ಸಂಪರ್ಕ ರಸ್ತೆ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ಸಂಜೆಯತನಕ ಅಧಿಕಾರಿಗಳಿಂದ ಸ್ಪಂಧನೆ ಸಿಗದ ಕಾರಣ ಸಂಜೆ ಪ್ರತಿಭಟನಾಕಾರರು ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಿಗ್ಗೆ ಪುತ್ತೂರಿನ ದರ್ಬೆ ವೃತ್ತದ ಬಳಿಯಿಂದ 'ದಲಿತರಿಗೆ ಇನ್ನೂ 47ರ ಸ್ವಾತಂತ್ರ್ಯ ಸಿಕ್ಕಿಲ್ಲ' ಎಂಬ ಘೋಷಣೆಯೊಂದಿಗೆ ಮಿನಿವಿಧಾನ ಸೌಧದ ತನಕ ಕಾಲ್ನಡಿಗೆ ಜಾಥ ನಡೆಸಿದ ದಲಿತರು ಮಿನಿವಿಧಾನ ಸೌಧದ ಎದುರು ಧರಣಿ ಪ್ರತಿಭಟನೆ ಆರಂಭಿಸಿದರು. ಶೇಕಮಲೆ ದಲಿತ ಕಾಲೋನಿಗೆ ರಸ್ತೆ ಸಂಪರ್ಕ ಮಾಡಿಕೊಡಬೇಕು ಎಂದು ಆಗ್ರಹಿಸಿ ಧರಣೆ ಸತ್ಯಾಗ್ರಹ ಆರಂಭಿಸಿದ ಪ್ರತಿಭಟನಾಕಾರರು ಸಂಬಂಧಪಟ್ಟ ಅಧಿಕಾರಿಗಳು ಬಂದು ನಮ್ಮ ಬೇಡಿಕೆ ಈಡೇರಿಸುವ ತನಕ ಇಲ್ಲಿಂದ ಕದಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಅವರು ಸಂಪರ್ಕ ರಸ್ತೆಗಾಗಿ ಕಳೆದ 12 ವರ್ಷಗಳಿಂದ ನಡೆಸುವ ಹೋರಾಟ ನಡೆಸಿದರೂ ಈ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಹೋರಾಟ ಇಂದಿಗೆ ಕೊನೆಯಾಗಬೇಕು. ನಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ 2 ದಿನದ ಆಹೋರಾತ್ರಿ ಧರಣಿ ನಡೆಸುತ್ತೇವೆ. ಮೂರನೆ ದಿನ ಅನ್ನ ಬಿಟ್ಟು ಸತ್ಯಾಗ್ರಹ ಮಾಡಲಿದ್ದೇವೆ. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಯಾವುದೇ ಸಮಸ್ಯೆ ಆದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿ ದಲಿತರ ಹಲವಾರು ವರ್ಷಗಳ ಬೇಡಿಕೆಯಾದ ರಸ್ತೆ ಸಂಪರ್ಕದ ಸಮಸ್ಯೆಯನ್ನು ಆ ಭಾಗದ ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕಾಗಿತ್ತು. ಆದರೆ ಈ ತನಕ ಯಾರಿಂದಲೂ ಯಾವುದೇ ಪರಿಹಾರ ಸಿಕ್ಕಿಲ್ಲ. ಇನ್ನೂ ಕೂಡಾ ಅಸಡ್ಡೆ ತೋರಿದರೆ. ಅಸಡ್ಡೆ ತೋರಿಸಿ ಹುನ್ನಾರ ನಡೆಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾರೆಂಬುವುದನ್ನು ತಿಳಿದು ಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು ಮಾತನಾಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ನಡೆಯುವ ಶೋಷಣೆಯನ್ನು ಪ್ರತಿಭಟಿಸುವುದಕ್ಕೆ ನಮ್ಮ ಸಂಘಟನೆ ಬೆಂಬಲ ಸೂಚಿಸುತ್ತದೆ ಎಂದರು. ಬಹುತೇಕ ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳ ಸಮಸ್ಯೆ ಇದೆ. ಈ ಕುರಿತು ದಲಿತ್ ಸೇವಾ ಸಮಿತಿ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಈ ಕುರಿತು ಅಧಿಕಾರಿಗಳು ಪರಿಹಾರ ಕಲ್ಪಿಸದಿದ್ದಲ್ಲಿ ಎ.ಸಿ. ಕಚೇರಿಗೂ ನುಗ್ಗಲು ಸಿದ್ದ ಎಂದು ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್. ನಾರಾಯಣ್ ಅವರು ಮಾತನಾಡಿ ನಿಮ್ಮ ಕಾಲುದಾರಿಯನ್ನು ಎಷ್ಟೇ ಹಣ ಖರ್ಚಾದರೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಮಾಡಿಸಿ ಕೊಡುತ್ತೇನೆ ಎಂದು ಚುನಾವಣಾ ಸಂದರ್ಭದಲ್ಲಿ ಭರವಸೆ ಕೊಟ್ಟ ಶಾಸಕರು ಗೆದ್ದ ಬಳಿಕ ಅಭಿನಂದನಾ ಸಮಾರಂಭದಲ್ಲಿ ಇಲ್ಲಿರುವ ಖಾಸಗಿ ವ್ಯಕ್ತಿಯಾದ ಇಸುಬು ಸಾಹುಕಾರ್ ಅವರು ತಮ್ಮ ವರ್ಗ ಜಾಗ ಬಿಟ್ಟು ಕೊಟ್ಟರೆ ರಸ್ತೆ ಮಾಡಿಕೊಡಬಹುದು ಎಂದು ಹೇಳಿದ್ದಾರೆ. ಅವರು ಜಾಗ ಕೊಡುವುದಾದರೆ ರಸ್ತೆ ಮಾಡಲು ನಮಗೂ ಗೊತ್ತಿದೆ, ಅವರಾಗಿಯೇ ಜಾಗ ಕೊಟ್ಟರೆ ಶಾಸಕರು ಯಾಕೆ ಎಂದು ಪ್ರಶ್ನಿಸಿದರು.
ಉಪವಿಭಾಗಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಇಂದೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ ದಲಿತರು ಸಂಜೆ 5 ಗಂಟೆಯಾದರೂ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ಆಕ್ರೋಶಗೊಂಡು ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಪೊಲೀಸರು ಬಾಗಿಲು ಮುಚ್ಚಿ ಪ್ರತಿಭಟನಾಕಾರರು ಒಳಗೆ ಪ್ರವೇಶಿಸದಂತೆ ತಡೆದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಂತಶಂಕರ್ ಅವರು ಪ್ರತಿಭಟನಾಕಾರ ನಾಯಕರ ಜೊತೆ ನಡೆಸಿದ ಮಾತುಕತೆಯೂ ವಿಫಲವಾಯಿತು. ನಾಳೆ ಸ್ಥಳ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್ ಅವರು ತಿಳಿಸಿದಾಗ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಇಂದೇ ಜಾಗದ ಅಳತೆ ಮಾಡಿ ರಸ್ತೆ ಜಾಗ ಪಟ್ಟಾ ಜಾಗವಾಗಿದ್ದಲ್ಲಿ, ಅದರ ಬದಲು ತೋಡಿಗೆ ಮೋರಿ ಅಳವಡಿಸಿ ಅದರ ಮೇಲೆ ಮಣ್ಣು ಹಾಕಿ ರಸ್ತೆ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಬಳಿಕ ಉಪವಿಭಾಗಾಧಿಕಾರಿ ಡಾ. ರಘುನಂದನ್ ಮೂರ್ತಿ ಅವರು ತಹಶೀಲ್ದಾರ್ ಅನಂತಶಂಕರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಅವರ ಜೊತೆ ಸಮಾಲೋಚನೆ ನಡೆಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ತಹಶೀಲ್ದಾರ್ ಅನಂತಶಂಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ,ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸೇರಿದಂತೆ ಅಧಿಕಾರಿಗಳು ಸಂಜೆಯ ಬಳಿಕ ಶೇಕಮಲೆ ಕಾಲೋನಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಮುಸ್ಸಂಜೆ ವೇಳೆಗೆ ಕಚೇರಿಗೆ ಆಗಮಿಸಿದರು. ಅವರಿಂದ ಮಾಹಿತಿ ಪಡೆದುಕೊಂಡು ಉಪವಿಭಾಗಾಧಿಕಾರಿಗಳು ಧರಣಿ ನಿರತರ ಬಳಿಗೆ ಬಂದು ಸೋಮವಾರ ಎಂಜಿನಿಯರ್ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ತೋಡಿಗೆ ಮೋರಿ ಅಳವಡಿಸುವ ಕುರಿತು ಎಸ್ಟಿಮೇಟ್ ಮಾಡಲಿದ್ದಾರೆ. ಬುಧವಾರ ಪೂರ್ಣ ಮಾಹಿತಿ ನೀಡುತ್ತೇವೆ ಎಂದು ಭರವಸೆ ನೀಡಿದರು. ಈ ಭರವಸೆಯ ಹಿನ್ನಲೆಯಲ್ಲಿ ರಾತ್ರಿ ವೇಳೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.







