ಡಿ. 5, 6: ಕುವೈತ್ನಲ್ಲಿ ಜಿಸಿಸಿ ಸಮ್ಮೇಳನ
ಕುವೈತ್ ಸಿಟಿ, ನ. 30: ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಕೆಲವು ದೇಶಗಳ ನಡುವೆ ವಿವಾದ ಹೊಗೆಯಾಡುತ್ತಿದ್ದರೂ, ಮಂಡಳಿಯ ವಾರ್ಷಿಕ ಶೃಂಗಸಮ್ಮೇಳನ ಕುವೈತ್ನಲ್ಲಿ ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ.
ಕೊಲ್ಲಿ ಸಹಕಾರ ಮಂಡಳಿಯ ಸದಸ್ಯ ದೇಶಗಳಾಗಿರುವ ಸೌದಿ ಅರೇಬಿಯ, ಬಹರೈನ್ ಮತ್ತು ಯುಎಇಗಳು ಇನ್ನೊಂದು ಸದಸ್ಯ ದೇಶವಾಗಿರುವ ಕತರ್ ವಿರುದ್ಧ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನಗಳನ್ನು ವಿಧಿಸಿದ ಬಳಿಕ ಈ ದೇಶಗಳ ನಡುವೆ ದ್ವೇಷ ಹೊಗೆಯಾಡುತ್ತಿದೆ. ಹಾಗಾಗಿ, ಈ ವರ್ಷದ ವಾರ್ಷಿಕ ಶೃಂಗ ಸಮ್ಮೇಳನ ಏರ್ಪಡುವುದರ ಬಗ್ಗೆ ಅನಿಶ್ಚಿತತೆ ನೆಲೆಸಿತ್ತು.
ಸಮ್ಮೇಳನವು ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ ಎನ್ನುವುದನ್ನು ಕುವೈತ್ನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು. ಆದರೆ, ಇದರಲ್ಲಿ ಎಷ್ಟು ದೇಶಗಳು ಪಾಲ್ಗೊಳ್ಳುತ್ತವೆ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ.
ಈ ಹಿಂದೆ ಎರಡು ಬಣಗಳ ನಡುವೆ ರಾಜಿ ಏರ್ಪಡಿಸಲು ಮಧ್ಯಸ್ಥಿಕೆ ವಹಿಸಿ ವಿಫಲವಾಗಿರುವ ಕುವೈತ್, ಬಿಕ್ಕಟ್ಟನ್ನು ನಿವಾರಿಸಲು ಸಮ್ಮೇಳನವನ್ನು ಬಳಸಲಿದೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.