ಜಿಎಸ್ಟಿ ಜಾರಿಯಿಂದ ಭವಿಷ್ಯದಲ್ಲಿ ಕೈಗಾರಿಕೆಗಳಿಗೆ ಅನುಕೂಲ: ಸಚಿವ ದೇಶಪಾಂಡೆ
ಬೆಂಗಳೂರು, ನ. 30: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬಂದ ಬಳಿಕ ರಾಜ್ಯದ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಆದರೆ, ಭವಿಷ್ಯದಲ್ಲಿ ಜಿಎಸ್ಟಿ ಜಾರಿಯಿಂದ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಭರವಸೆ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಆಡಳಿತಾವಧಿಯಲ್ಲಿ ಜಿಎಸ್ಟಿ ಜಾರಿಗೆ ಉದ್ದೇಶಿಸಿತ್ತು. ಆದರೆ, ಆ ವೇಳೆ ಬಿಜೆಪಿ ಬೆಂಬಲ ನೀಡಲಿಲ್ಲ. ಇದೀಗ ಏಕರೂಪ ತೆರಿಗೆ ವ್ಯವಸ್ಥೆಗೆ ಜಿಎಸ್ಟಿ ಜಾರಿಗೆ ತರಲಾಗಿದೆ. ಕಾಂಗ್ರೆಸ್ ಪಕ್ಷ ಜಿಎಸ್ಟಿಯನ್ನು ಸ್ವಾಗತಿಸಿದೆ. ಆದರೆ, ಅಗತ್ಯ ಪೂರ್ವ ಸಿದ್ಧತೆ ಇಲ್ಲದೆ ಜಿಎಸ್ಟಿ ಜಾರಿ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಅದನ್ನು ಕ್ರಮಬದ್ಧವಾಗಿ ಜಾರಿಗೊಳಿಸಿದರೆ ಈಗ ಎದುರಿಸುತ್ತಿರುವ ಸಮಸ್ಯೆ ಕಡಿಮೆ ಆಗಬಹುದು ಎಂದರು ಹೇಳಿದರು.
ಚೆಕ್‌ಪೋಸ್ಟ್‌ಗಳಿಲ್ಲ: ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳಿಲ್ಲ. ಸಾರಿಗೆ ಮತ್ತು ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿರಬಹುದು ಎಂದ ದೇಶಪಾಂಡೆ, ಜಿಎಸ್ಟಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡಲಾಗಿದೆ ಎಂದರು.
ಪುನರ್ ಪರಿಶೀಲನೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.,(ಎಚ್‌ಎಎಲ್)ಗೆ ನೀಡಿದ್ದ ರಾಫೆಲ್ ಹೆಲಿಕಾಪ್ಟರ್ ಉತ್ಪಾದನೆ ಗುತ್ತಿಗೆ ರದ್ದು ಪಡಿಸಿರುವುದರಿಂದ ಭವಿಷ್ಯದಲ್ಲಿ ಎಚ್‌ಎಎಲ್ ಬೆಳವಣಿಗೆಗೆ ತೊಂದರೆಯಾಗಲಿದೆ. ಆದುದರಿಂದ ಕೇಂದ್ರ ಸರಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂದು ದೇಶಪಾಂಡೆ ಮನವಿ ಮಾಡಿದರು.
ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಎಚ್‌ಎಎಲ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, ರಾಫೆಲ್ ಹೆಲಿಕಾಪ್ಟರ್ ಉತ್ಪಾದನೆ ತಾಂತ್ರಿಕತೆಯನ್ನಷ್ಟೇ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿಯಿದೆ ಎಂದ ಅವರು, ಕೇಂದ್ರದ ಈ ನಿರ್ಧಾರಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದರು.
ತಾನು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ವರದಿಗಳು ಆಧಾರರಹಿತ. ತಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಪ್ರಧಾನಿ ಮೋದಿ ನನ್ನ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದರೆ ಅದು ಮೂರು ವರ್ಷದ್ದಷ್ಟೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವತ್ತು ವರ್ಷದಿಂದ ನನ್ನ ಗೆಳೆಯರು.
-ಆರ್.ವಿ.ದೇಶಪಾಂಡೆ, ಕೈಗಾರಿಕಾ ಸಚಿವ







